

ದಾವಣಗೆರೆ : ಜಿಲ್ಲೆಯ ರಸ್ತೆ ಗುಂಡಿಗಳನ್ನು ನ. 1 ರೊಳಗಾಗಿ ಮುಚ್ಚಿ ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಗುಂಡಿಗಳಿಂದಾಗಿ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿವೆ. ಜನರು ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ಮಹಿಳೆಯರಿಗಂತೂ ಇನ್ನೂ ಕಷ್ಟದ ಪರಿಸ್ಥಿತಿ ಇದೆ ಎಂದು ತಿಳಿಸಿದರು. ನಗರದ ರಸ್ತೆಗಳಲ್ಲಿ ಸರ್ವೀಸ್ ಗ್ಯಾಪ್‌ಗಳನ್ನು ಸರಿಪಡಿಸಲಾಗುತ್ತಿದೆ. ಕೆಲವು ಕಡೆ ನೀರು ನಿಲ್ಲುತ್ತವೆ. ಇನ್ನೂ ಕೆಲವೆಡೆ ಪೇವರ್ಸ್ ಅಳವಡಿಸಲಾಗುವುದು. ಗುಂಡಿಯ ಸ್ವರೂಪವನ್ನು ನೋಡಿಕೊಂಡು ಅದಕ್ಕೆ ತಕ್ಕಂತೆ ದುರಸ್ತಿ ಮಾಡಬೇಕು ಎಂದು ಹೇಳಿದರು. ಕೆಲವು ರಸ್ತೆಗಳ ಬದಿಯಲ್ಲಿ ತ್ಯಾಜ್ಯ ಸುರಿಯುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಬೇರೆ ಊರಿನಿಂದ ಬರುವವರು ನಗರವನ್ನು ಪ್ರವೇಶಿಸಿದಾಗ ದಾವಣಗೆರೆಯ ಬಗ್ಗೆ ಒಳ್ಳೆಯ ಭಾವನೆ ಬರುವಂತಿರಬೇಕು. ಇತ್ತೀಚೆಗೆ ಮುಖ್ಯ ಕಾರ್ಯದರ್ಶಿ ಅವರು ದಾವಣಗೆರೆಗೆ ಭೇಟಿ ನೀಡಿದ್ದಾಗ ಈ ಅಂಶವನ್ನು ಗಮನಿಸಿದ್ದಾರೆ ಎಂದರು. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಕಾರವೂ ಬೇಕು. ನಗರದ ಕೆಲವು ಭಾಗಗಳಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಸಿಮೆಂಟ್ ಬ್ಲಾಕ್‌ಗಳ ಅಗತ್ಯವಿದೆ ಎಂದು ತಿಳಿಸಿದರು. ಸಿಸಿ ರಸ್ತೆಯಲ್ಲಿ ಡಾಂಬರ್ ಹಾಕುವುದು ಬೇಡ, ಕಾಂಕ್ರಿಟ್ ಹಾಕಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಮನವಿ ಮಾಡಿದರು.