

ದಾವಣಗೆರೆ : ಕೇಂದ್ರ ಸರ್ಕಾರದ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರವನ್ನು ದಾವಣಗೆರೆಯಲ್ಲಿ ಸ್ಥಾಪಿಸುವ ಚಿಂತನೆ ಇದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ವಾಹನ ಚಾಲನ ತರಬೇತಿ ಶಾಲೆ ಮಾಲೀಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಬೆಂಗಳೂರಿನಲ್ಲಿ ಬಿಟ್ಟರೆ ರಾಜ್ಯದ ಯಾವ ಜಿಲ್ಲೆಯಲ್ಲೂ ಈ ತರಬೇತಿ ಕೇಂದ್ರವಿಲ್ಲ. ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಈ ಕೇಂದ್ರ ಸ್ಥಾಪಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಬೇಕಾದ ಜಾಗವನ್ನು ನೀಡುವುದಾಗಿ ಕೇಂದ್ರ ಸಚಿವರಿಗೆ ಹೇಳಿದ್ದೇವೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬರುವ ದಿನಗಳಲ್ಲಿ ಇದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು. ನಾಗರಿಕ ಸೇವೆಗೆ (ಸಿವಿಲ್ ಸರ್ವೀಸ್) ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೇ ಪ್ರವೇಶ ಪರೀಕ್ಷೆ ನಡೆಸಿ, 300 ಆಸಕ್ತ ವಿದ್ಯಾರ್ಥಿಗಳನ್ನು ಗುರುತಿಸಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ನಗರದ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ಬರುವ ಮಾರ್ಚ್‌ನಲ್ಲಿ ಕ್ಯೂ ಸ್ಪೈಡರ್ ಕಂಪನಿಯವರಿಂದ ಜಿಲ್ಲೆಯ ಮಕ್ಕಳಿಗಾಗಿ ನಗರದಲ್ಲಿ ಉಚಿತ ತರಬೇತಿ ಕೊಡಿಸಲಾಗುವುದು. ಬೆಂಗಳೂರಿನಲ್ಲಿ ಈ ಕಂಪನಿಯಿಂದ ತರಬೇತಿ ಪಡೆಯಬೇಕಾದರೆ ಕನಿಷ್ಠ 40 ಸಾವಿರ ರೂ. ಶುಲ್ಕ ನೀಡಬೇಕು. ದಾವಣಗೆರೆಯಲ್ಲಿ ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುವುದು. ಆಸಕ್ತರು ಭಾಗವಹಿಸಬಹುದು ಎಂದು ಹೇಳಿದರು. ಸಂಚಾರ ನಿಯಮ ಪಾಲಿಸುವಲ್ಲಿ ಸ್ವಯಂಪ್ರೇರಿತ ಬದಲಾವಣೆ ಅಗತ್ಯವಿದೆ. ತಪ್ಪು ಮಾಡುವುದಿಲ್ಲ. ನಿಯಮ ಮೀರುವುದಿಲ್ಲ ಎಂದು ಸಂಕಲ್ಪ ಮಾಡಿಕೊಳ್ಳಿ. ವಿದೇಶದ ಜನರಂತೆ ಶಿಸ್ತು ಪಾಲನೆ ಅಗತ್ಯ ಎಂದರು. ಸಾಮಾಜಿಕ ಜವಾಬ್ದಾರಿಯೂ ಮುಖ್ಯವಾಗಿದ್ದು ರಕ್ತದಾನ, ವನ ಮಹೋತ್ಸವದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ. ಇದರಿಂದ ಸಹೋದರತ್ವ ಬೆಳೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಏಕನಾಥ್, ಹೆಚ್ಚುವರಿ ಎಸ್ಪಿ ಜಿ. ಮಂಜುನಾಥ, ಜಂಟಿ ಸಾರಿಗೆ ಆಯುಕ್ತ ಭೀಮನಗೌಡ ಪಾಟೀಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್. ಪ್ರಮುತೇಶ್, ವಾಹನ ಚಾಲನ ತರಬೇತಿ ಸಂಸ್ಥೆ ಅಧ್ಯಕ್ಷ ಫಯಾಜ್ ಅಹಮ್ಮದ್ ಇದ್ದರು. ಮಂಜುನಾಥ್ ಸ್ವಾಗತಿಸಿದರು. ಜೀವಿತಾ ಪ್ರಾರ್ಥಿಸಿದರು.