ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ

dc-gangadharaswamy-gm_20251018222919184.jpg
Published on

ದಾವಣಗೆರೆ  : ನ್ಯಾಮತಿ ಮತ್ತು ಹರಿಹರ ತಾಲೂಕುಗಳಲ್ಲಿ ನ್ಯಾಯಬೆಲೆ ಅಂಗಡಿಗಳಿಂದ ಅಕ್ಕಿಯು ಅತಿ ಹೆಚ್ಚಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.  ಜಿಲ್ಲಾಡಳಿತ ಭವನದಲ್ಲಿ ಶನಿವಾರ ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ವಿಷಯವಾಗಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು.  ಕೆಲ ಜಿಲ್ಲೆಗಳಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಹೊರ ದೇಶಗಳಿಗೆ ರವಾನಿಸಲಾಗುತ್ತಿದೆ. ಗಂಜಿ ಮಾಡಲು ತೆಗೆದುಕೊಂಡು ಹೋಗಲಾಗುತ್ತಿದೆ. ಅಂಥ ಬೆಳವಣಿಗೆಗಳು ನಮ್ಮ ಜಿಲ್ಲೆಯಲ್ಲೂ ಆಗದಂತೆ ತಡೆಯಬೇಕು ಎಂದು ತಿಳಿಸಿದರು.  ಮಧ್ಯವರ್ತಿಗಳು ಹಣದ ಆಮಿಷವೊಡ್ಡಿ ಬಡವರಿಂದ ಅಕ್ಕಿ ಖರೀದಿಸುತ್ತಿದ್ದಾರೆ. ಮನೆಮನೆಗೆ ಹೋಗಿ ಕಡಿಮೆ ದುಡ್ಡಿಗೆ ಅಕ್ಕಿ ಸಂಗ್ರಹಿಸುವ ದಂಧೆಕೋರರು, ಅದನ್ನು ರಾಜ್ಯದ ಗಡಿಯಾಚೆ ಮಾರುತ್ತಿದ್ದಾರೆ ಎಂದರು.  ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಫ್‌ಐಆರ್ ದಾಖಲಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.  ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನಭಾಗ್ಯದ ಅಕ್ಕಿ ವ್ಯವಸ್ಥಿತವಾಗಿ ರೈಸ್‌ಮಿಲ್ಗಳ ಗೋಡೌನ್ ಸೇರುತ್ತಿದೆ. ಟ್ರಾನ್ಸ್ಪೋರ್ಟ್ ವಾಹನಗಳಿಗೆ ಜಿಪಿಎಫ್ ಅಳವಡಿಸಬೇಕು. ಅನ್ನಭಾಗ್ಯದ ಸ್ಟಾಕ್ ಬಂದ ತಕ್ಷಣ ವಾಟ್ಸಾಪ್ ಗ್ರೂಪ್‌ನಲ್ಲಿ ವಿಡಿಯೋ ಹಾಕಬೇಕು ಎಂದು ತಿಳಿಸಿದರು.  ಅಕ್ರಮವಾಗಿ ಆಟೋ, ಗೂಡ್ಸ್ ಗಾಡಿಗಳಲ್ಲಿ ಅಕ್ಕಿಯನ್ನು ಸಾಗಿಸುವ ವಾಹನಗಳಿಗೆ ದಂಡ ವಿಧಿಸಬೇಕೆಂದರು.  ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಉಪ ವಿಭಾಗಾಧಿಕಾರಿ ಸಂತೋಷ್, ಗ್ರಾಮೀಣ ಉಪ ವಿಭಾಗದ ಡಿವೈಎಸ್‌ಪಿ ಬಸವರಾಜ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net