

ರಮೇಶ ಜಹಗೀರದಾರ್ ದಾವಣಗೆರೆ : ಭೂ ಒಡೆತನದ ಹಕ್ಕು ದಾಖಲೆಗಳನ್ನು ವಾರಸುದಾರರ ಹೆಸರಿಗೆ ಮಾಡಿಕೊಡುವ ಪೌತಿ ಖಾತೆ ಆಂದೋಲನವನ್ನು ಕಂದಾಯ ಇಲಾಖೆಯು ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿದೆ. 78,310 ಪ್ರಕರಣಗಳಲ್ಲಿ ಇದುವರೆಗೆ 13,797 ಪೂರ್ಣಗೊಳಿಸಲಾಗಿದೆ. ರೈತರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಜನರ ಮನೆ ಮನೆಗೆ ತೆರಳಿ ಮೊಬೈಲ್ ಆ್ಯಪ್ ನೆರವಿನಿಂದ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದ ಅನಗತ್ಯ ವಿಳಂಬ ತಪ್ಪುವ ಜತೆಗೆ ಖರ್ಚು ಕೂಡಾ ಕಡಿಮೆಯಾಗಲಿದೆ. ಭೂ ಹಿಡುವಳಿದಾರರು ಮೃತಪಟ್ಟ ನಂತರ ಅವರ ಹೆಸರಿನಲ್ಲಿರುವ ಭೂ ಒಡೆತನದ ಹಕ್ಕು ದಾಖಲೆಗಳನ್ನು ಕುಟುಂಬದ ವಾರಸುದಾರರ ಹೆಸರಿಗೆ ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರದಿಂದ ಮಂಜೂರಾದ ಪಿಎಂ ಕಿಸಾನ್ ಯೋಜನೆಯ ಹಣ ಬರುವುದಿಲ್ಲ. ಬೆಳೆ ವಿಮೆ ಸಿಗುವುದಿಲ್ಲ. ಬ್ಯಾಂಕ್ ಸಾಲ ದೊರೆಯುವುದಿಲ್ಲ. ಹೀಗೆ ಹಲವು ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಸಾಮಾನ್ಯವಾಗಿ ಪೌತಿ ಖಾತೆ ಮಾಡಿಸಿಕೊಳ್ಳಬೇಕೆಂದರೆ ಹಿಡುವಳಿದಾರರ ಮರಣ ಪ್ರಮಾಣಪತ್ರ, ವಂಶವೃಕ್ಷ ಇನ್ನಿತರ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆ ದಾಖಲೆಗಳನ್ನು ಪಡೆದುಕೊಳ್ಳಲು ಕುಡುಂಬದವರು ಸಾವಿರಾರು ರೂ. ಖರ್ಚು ಮಾಡುವ ಜತೆಗೆ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಿತ್ತು. ಬಹಳಷ್ಟು ರೈತರು ಪೌತಿ ಖಾತೆಯನ್ನೇ ಮಾಡಿಸಿಕೊಂಡಿರಲಿಲ್ಲ. 10-15 ವರ್ಷಗಳಿಂದಲೂ ಪೌತಿ ಆಗದೇ ಇರುವ ಕೇಸ್‌ಗಳೂ ಇವೆ. ರೈತರ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿದ ಸಂದರ್ಭದಲ್ಲಿ ಎಷ್ಟು ಮಂದಿ ಹಿಡುವಳಿದಾರರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಕಂದಾಯ ಇಲಾಖೆಗೆ ದೊರಕಿತ್ತು. ಅದನ್ನು ಆಧರಿಸಿ ಗ್ರಾಮವಾರು ಮೃತ ಹಿಡುವಳಿದಾರರ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಆ ರೀತಿಯಾಗಿ ಜಿಲ್ಲೆಯಲ್ಲಿ 78,310 ಪ್ರಕರಣಗಳಿವೆ. ಅಂಥ ಕುಟುಂಬಗಳು ವಾಸವಾಗಿರುವ ಸ್ಥಳಗಳಿಗೇ ತೆರಳಿ, ಮನೆ ಬಾಗಿಲಲ್ಲೇ ಪೌತಿ ಖಾತೆ ಮಾಡಿಕೊಡುವ ಆಂದೋಲನವನ್ನು ಕಳೆದ ಮೇ ತಿಂಗಳಲ್ಲಿ ಆರಂಭಿಸಲಾಯಿತು. ಮರಣ ಪ್ರಮಾಣ ಪತ್ರ ಇಲ್ಲದಿದ್ದರೆ ಗ್ರಾಮ ಸಹಾಯಕರು ಆ ಮನೆಗೇ ಭೇಟಿ ನೀಡಿ ಮಹಜರು ಮಾಡುತ್ತಾರೆ. ಅದಾದ ನಂತರ ಪ್ರಕ್ರಿಯೆ ಮುಂದುವರಿಯುತ್ತದೆ. ...