

ದಾವಣಗೆರೆ : ಸಮಾಜದ ಆರೋಗ್ಯದ ದೃಷ್ಟಿಯಿಂದ ಮೀಸಲಾತಿ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಪ್ರತಿಪಾದಿಸಿದರು. ಸಾಹಿತ್ಯ ಸಂವಾದದ ಸಮಾರೋಪ ಭಾಷಣ ಮಾಡಿ, ಸಮಾಜದಲ್ಲಿ ಉಳ್ಳವರು, ಇಲ್ಲದವರು ಎಂಬ ಅಂತರವಿಲ್ಲದೇ ಸಮಾನತೆ ಇರಬೇಕು. ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಇರಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಬದುಕಿನಲ್ಲಿ ವೈಚಾರಿಕತೆ ಅಳವಡಿಸಿಕೊಳ್ಳದಿದ್ದರೆ ದೊಡ್ಡ ನಷ್ಟವಾಗುತ್ತದೆ. ಇತರರ ಬಗ್ಗೆ ಪ್ರೀತಿಯ ಭಾವನೆ ಹೊಂದಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. ನಮ್ಮ ಆಹಾರ ಪದ್ಧತಿಯ ಬಗ್ಗೆಯೂ ಟೀಕೆಗಳು ಬರುತ್ತಿರುವುದು ದುರ್ದೈವ. ಕಳೆದ 100 ವರ್ಷಗಳಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಸಾವಿರಾರು ಜನರಲ್ಲಿ ಶೇ. 80 ರಿಂದ 85 ಮಂದಿ ಮಾಂಸಾಹಾರಿಗಳೇ ಆಗಿದ್ದಾರೆ ಎಂದು ಹೇಳಿದರು. ಡಾ. ಬೆಸಗರಹಳ್ಳಿ ರಾಮಣ್ಣ ನಮ್ಮ ನಾಡಿನ ವಿಶಿಷ್ಟ ಕತೆಗಾರರು. ವೈಚಾರಿಕ ಲೋಕಕ್ಕೆ ಅನೇಕ ಬರಹಗಾರರ ಕೊಡುಗೆ ಇದೆ ಎಂದು ತಿಳಿಸಿದರು.