ಒಳಮೀಸಲಾತಿ ಸಾಮಾಜಿಕ ನ್ಯಾಯದಂತೆ ಆಗಿಲ್ಲ

IMG-20250822-WA0037.jpg
Published on

ದಾವಣಗೆರೆ :  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ನೆಲೆಗಟ್ಟಿನ ಮೇಲೆ ಒಳಮೀಸಲಾತಿ ಅನುಷ್ಠಾನಕ್ಕೆ ತಂದಿಲ್ಲ. ಅವರು ಅಲೆಮಾರಿ ಸಮುದಾಯಕ್ಕೆ ಮಾಡಿರುವ ಅನ್ಯಾಯಕ್ಕೆ ನನ್ನ ವಿರೋಧವಿದೆ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.  ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಹುಳುಕು ಹೊರಗೆ ಬರುತ್ತದೆ ಎಂಬ ಕಾರಣಕ್ಕೆ ಸಿಎಂ ಚರ್ಚೆಗೆ ಅವಕಾಶ ನೀಡದೇ ತೀರ್ಮಾನ ಕೈಗೊಂಡಿದ್ದಾರೆ. ಇದರ ಹಿಂದೆ ರಾಜಕೀಯ ಲಾಭದ ಉದ್ದೇಶವಿದೆ ಎಂದು ತಿಳಿಸಿದರು.  ಅಲೆಮಾರಿ ಸಮುದಾಯ 75 ವರ್ಷ ಕಳೆದರೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಇವರಿಗೆ ಶೇ. 1ರಷ್ಟು ಮೀಸಲಾತಿ ನೀಡಲು ಈ ಹಿಂದಿನ ಎಲ್ಲ ಆಯೋಗಗಳು ಶಿಫಾರಸು ಮಾಡಿದ್ದವು. ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಕಲ್ಪಿಸುವ ಸಂದರ್ಭದಲ್ಲಿ ರಾಜಕಾರಣಕ್ಕೆ ತಲೆಬಾಗಬಾರದಿತ್ತು. ರಾಜಕೀಯ ದೃಷ್ಟಿಯಿಂದ ಸಾಮಾಜಿಕ ನ್ಯಾಯ ನೀಡಲು ಸಾಧ್ಯವಿಲ್ಲ ಎಂದರು.  ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತರಬೇಕಿತ್ತು. ಮೀಸಲಾತಿ ಪ್ರಮಾಣ ಶೇ. 50ರ ಮಿತಿ ಮೀರುವ ಅವಕಾಶವಿದೆ. ನ್ಯಾಯಮೂರ್ತಿಗಳ ಅಭಿಪ್ರಾಯ ಪಡೆದು ಅಲೆಮಾರಿ ಸಮುದಾಯಕ್ಕೆ ನ್ಯಾಯ ಕಲ್ಪಿಸುವ ಅವಕಾಶ ರಾಜ್ಯ ಸರ್ಕಾರಕ್ಕೆ ಈಗಲೂ ಇದೆ ಎಂದು ಹೇಳಿದರು.  ಮಾದಿಗ ಸಮುದಾಯಕ್ಕಿಂತಲೂ ಹಿಂದುಳಿದ, ಎಸ್‌ಎಸ್‌ಎಲ್‌ಸಿ ಕೂಡ ಉತ್ತೀರ್ಣ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಅಲೆಮಾರಿ ಸಮುದಾಯವಿದೆ. ಬೀದಿಗಳಲ್ಲಿ ಬದುಕು ಕಟ್ಟಿಕೊಳ್ಳಲು ಸೆಣಸಾಡುತ್ತಿರುವ ಅಲೆಮಾರಿಗಳನ್ನು ಬಲಾಢ್ಯ ಸಮುದಾಯಗಳ ಜತೆಗೆ ಸೇರಿಸಿ ಮೀಸಲಾತಿ ಕೊಟ್ಟಿರುವುದು ಸಮಂಜಸವಲ್ಲ ಎಂದು ತಿಳಿಸಿದರು.  ಮಾದಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ರಾಜ್ಯ ಸರ್ಕಾರ ಕೊಟ್ಟಿಲ್ಲ. ಹಿಂದುಳಿದಿರುವುಕೆ ಹಾಗೂ ದತ್ತಾಂಶದ ಆಧಾರದ ಮೇರೆಗೂ ಇದನ್ನು ನಿರ್ಧರಿಸಿಲ್ಲ. ಆದರೂ, ಗೊಂದಲ ಸೃಷ್ಟಿಸಬಾರದು ಎಂಬ ಉದ್ದೇಶದಿಂದ ಇಡೀ ಮಾದಿಗ ಸಮುದಾಯವು ರಾಜ್ಯ ಸರ್ಕಾರ ಕಲ್ಪಿಸಿದ ಮೀಸಲಾತಿಯನ್ನು ಸ್ವಾಗತಿಸಿದೆ ಎಂದರು.  ...  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net