ಒಳಮೀಸಲಾತಿಗೆ ನಿಖರ ದತ್ತಾಂಶ ಮಾನದಂಡವಾಗಲಿ

IMG-20241023-WA0166.jpg
Published on

ದಾವಣಗೆರೆ : ರಾಜ್ಯ ಸರ್ಕಾರವು ಇತ್ತೀಚಿನ ದತ್ತಾಂಶವನ್ನು ಸಂಗ್ರಹಿಸಿ ಒಳಮೀಸಲಾತಿ ವರ್ಗೀಕರಣ ಮಾಡಬೇಕು ಎಂದು ಬಂಜಾರ ಸಮುದಾಯದ ಮುಖಂಡ, ವಕೀಲ ರಾಘವೇಂದ್ರ ನಾಯ್ಕ ಹೇಳಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ವರ್ಗೀಕರಣ ಮಾಡಬೇಕಾದರೆ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಸಂಗ್ರಹಿಸಿದ ನಿಖರವಾದ ದತ್ತಾಂಶವೇ ಮಾನದಂಡವಾಗಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ ಎಂದು ತಿಳಿಸಿದರು.  ರಾಜ್ಯ ಸರ್ಕಾರ ನಿಖರವಾದ ದತ್ತಾಂಶದ ಆಧಾರದ ಮೇಲೆಯೇ ಒಳಮೀಸಲಾತಿ ಜಾರಿಗೆ ಮುಂದಾಗಬೇಕಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಯಾವುದೇ ಒಂದು ಜಾತಿ ಮೀಸಲಾತಿ ಸೌಲಭ್ಯ ಪಡೆದುಕೊಳ್ಳುವುದರಲ್ಲಿ ಎಷ್ಟು ಪ್ರಮಾಣದಲ್ಲಿ ಹಿಂದುಳಿದಿದೆ. ಅದಕ್ಕೆ ಕಾರಣವಾದ ಅಂಶಗಳು ಯಾವವು, ಆ ಉಪ ಜಾತಿಯ ಜನಸಂಖ್ಯೆ ಪ್ರಮಾಣ ಎಷ್ಟಿದೆ. ಶೈಕ್ಷಣಿಕ ಮಟ್ಟ ಎಷ್ಟು ಪ್ರಮಾಣದಲ್ಲಿದೆ. ಸರ್ಕಾರಿ ಉದ್ಯೋಗ ಪಡೆದವರ ಸಂಖ್ಯೆ ಎಷ್ಟು, ಆರ್ಥಿಕ ಸ್ಥಿತಿಗತಿ, ರಾಜಕೀಯ ಸ್ಥಾನಮಾನದ ಮಾಹಿತಿ ಬೇಕಾಗುತ್ತದೆ ಎಂದರು.  ನ್ಯಾಯಮೂರ್ತಿ ಸದಾಶಿವ ಆಯೋಗ ನೇಮಕವಾಗಿ 17 ವರ್ಷ ತುಂಬಿದೆ. ಹಿಂದುಳಿದ ವರ್ಗಗಳ ಆಯೋಗ ಜಾತಿ ಗಣತಿ ವರದಿಯ ಅಂಕಿ ಅಂಶಗಳೂ 9 ವರ್ಷಗಳಷ್ಟು ಹಳೆಯದಾಗಿವೆ. ಈ ಎರಡೂ ಆಯೋಗದ ವರದಿಗಳ ಬಗ್ಗೆ ಅವುಗಳು ಸಲ್ಲಿಕೆಯಾದ ಸಂದರ್ಭದಲ್ಲಿಯೇ ಅನುಮಾನ ಮತ್ತು ಅಪಸ್ವರಗಳು ವ್ಯಾಪಕವಾಗಿ ಕೇಳಿ ಬಂದಿದ್ದವು ಎಂದು ನೆನಪಿಸಿದರು.  ವಸ್ತುಸ್ಥಿತಿ ಹೀಗಿರುವಾಗ ಹಳೆಯ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಒಳಮೀಸಲಾತಿ ಕಲ್ಪಿಸುವುದು ನ್ಯಾಯಸಮ್ಮತವಲ್ಲ. ಒಳ ವರ್ಗೀಕರಣ ಮತ್ತು ಒಳ ಮೀಸಲಾತಿಗೆ ವೈಜ್ಞಾನಿಕವಾಗಿ ಸಂಗ್ರಹಿಸಿದ ಇತ್ತೀಚಿನ ನಿಖರ ದತ್ತಾಂಶವೇ ಮಾನದಂಡವಾಗಬೇಕು ಎಂದು ಆಗ್ರಹಿಸಿದರು.  ರಾಜ್ಯ ಸರ್ಕಾರ ಎಲ್ಲ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡ ಹೊಸ ಆಯೋಗವೊಂದನ್ನು ರಚಿಸಿ, ವಸ್ತುನಿಷ್ಠ ಅಧ್ಯಯನಕ್ಕೆ ಮುಂದಾಗಬೇಕು. ಸಹೋದರ ಸಮುದಾಯಗಳಲ್ಲಿ ಯಾವುದೇ ಸಂಘರ್ಷ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಒಂದು ಗುಂಪಿನ ಒತ್ತಡಕ್ಕೆ ಮಣಿದು, ತರಾತುರಿಯಲ್ಲಿ ನಿರ್ಣಯ ಕೈಗೊಳ್ಳಬಾರದು ಎಂದು ಹೇಳಿದರು.  ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ಸಮುದಾಯಕ್ಕೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬಂಜಾರ ಸಮುದಾಯದ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.  ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಹನುಮಂತ ನಾಯ್ಕ, ಚಂದ್ರನಾಯ್ಕ, ಆರ್.ಎಚ್. ಶಿವಪ್ರಕಾಶ್, ಮಂಜಾ ನಾಯ್ಕ, ಕೊಟ್ರೇಶ್ ನಾಯ್ಕ, ನಂಜಾ ನಾಯ್ಕ, ವೆಂಕಟೇಶ್ ನಾಯ್ಕ, ರವಿ ನಾಯ್ಕ, ಕುಬೇರ ನಾಯ್ಕ, ಗೋಪ್ಯಾ ನಾಯ್ಕ, ಸಂದೇಶ್ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net