

ದಾವಣಗೆರೆ : ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೂ ಮೊದಲು ಜನಗಣತಿ ನಡೆಸಬೇಕು ಎಂದು ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವನಾಯ್ಕ ಸರ್ಕಾರಕ್ಕೆ ಮನವಿ ಮಾಡಿದರು. ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘದಿಂದ ನಗರದ ಚಿಗಟೇರಿ ಲೇಔಟ್‌ನ ಬಂಜಾರ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವುದಾದರೆ ಸರ್ಕಾರ ಮೊದಲು ಜನಗಣತಿ ನಡೆಸಬೇಕು. ಆನಂತರ ಒಳಮೀಸಲಾತಿ ರಚನೆಗೆ ಪ್ರಯತ್ನಿಸಬೇಕು ಎಂದು ತಿಳಿಸಿದರು. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಅನೇಕ ಜನಪ್ರತಿನಿಧಿಗಳು, ‘ಕೆನೆಪದರ ನೀತಿ ಸಂವಿಧಾನ ಬಾಹಿರ. ಸಂವಿಧಾನದಲ್ಲಿ ಇದರ ಉಲ್ಲೇಖವಿಲ್ಲ. ಇದನ್ನು ರದ್ದುಪಡಿಸಬೇಕು ಹಾಗೂ ಒಳಮೀಸಲಾತಿ ಇರಬೇಕು’ ಎಂದು ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದ್ದಾರೆ ಎಂದರು. ಪರಿಶಿಷ್ಟ ಜಾತಿಯಲ್ಲಿ ಉಳ್ಳವರನ್ನು ತೆಗೆಯಬೇಕೆಂದು ಕೆನೆಪದರ ಹೇಳುತ್ತದೆ. ಆದರೆ ರಾಜಕಾರಣಿಗಳು ಅದನ್ನು ತಿರಸ್ಕರಿಸುತ್ತಾರೆ. ಸಂವಿಧಾನದಲ್ಲಿ ಕೆನೆಪದರ ನೀತಿ ಇಲ್ಲ ಎನ್ನುವುದಾದರೆ ಒಳಮೀಸಲಾತಿ ಕೊಡಬೇಕೆಂದು ಇದೆಯೇ? ಎಂದು ಪ್ರಶ್ನಿಸಿದ ಅವರು, ಒಳ ಮೀಸಲಾತಿಯಿಂದ ಕೆಲವು ವರ್ಗಗಳಿಗೆ ಅನುಕೂಲ ಹಾಗೂ ಇನ್ನೂ ಕೆಲವರಿಗೆ ಆಘಾತ ಆಗುವ ಸಂದರ್ಭ ಬರಲಿದೆ ಎಂದು ಹೇಳಿದರು. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದು, ಎಡಗೈ ಸಮುದಾಯಕ್ಕೆ 6, ಬಲಗೈ ಸಮುದಾಯಕ್ಕೆ 5 ಹಾಗೂ ಇತರ 99 ಜಾತಿಗಳಿಗೆ ಶೇ.3ರಷ್ಟು ಮೀಸಲಾತಿ ನೀಡಬೇಕೆಂಬುದು ನ್ಯಾ.ಸದಾಶಿವ ಆಯೋಗದ ಶಿಫಾರಸು. ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸುವುದಾದರೆ ಮೇಲ್ಮನವಿ ಸಲ್ಲಿಸಬೇಕು. ಇಲ್ಲವೇ ಇದನ್ನು ಯಥಾವತ್ತಾಗಿ ಜಾರಿಗೆ ತರುವುದಾದರೆ ಮೂರು ವರ್ಗಗಳಿಗೆ ತಲಾ ಶೇ.5ರಷ್ಟು ಮೀಸಲಾತಿ ಕೊಡುವುದು ಸೂಕ್ತ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಂಜಾರ ನಿಗಮಕ್ಕೆ ತನ್ನದೇ ಆದ ಬೈಲಾ ಇದ್ದು, ನಿಗಮದ ಸ್ಥಾಪನೆಯ ಉದ್ದೇಶ ಇದರಲ್ಲಿದೆ. ರಾಜ್ಯ ತಾಂಡಾ ಅಭಿವೃದ್ಧಿ ನಿಗಮದಿಂದ ಶೀಘ್ರ ರಾಜ್ಯ ಪ್ರವಾಸ ಕೈಗೊಂಡು ನಾಯಕ್, ಡಾವೋ, ಕಾರ್ಬಾರಿ ಹಾಗೂ ರಾಜಕೀಯ ಪಕ್ಷಗಳ ಸದಸ್ಯರ ಸಭೆ ನಡೆಸಿ ಅರಿವು ಮೂಡಿಸುವ ಮೂಲಕ ಅಭಿವೃದ್ಧಿ ಕಾರ್ಯಗಳ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಮಾಜದಿಂದ 5 ಎಕರೆ ಜಮೀನು ನೀಡಿದರೆ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದಿಂದ ಲಂಬಾಣಿ ಕಾಲನಿ ಸೇವಾಭಾಯ್ ನಗರ ನಿರ್ಮಾಣ ಮಾಡಿಕೊಡಲಾಗುವುದು ಎಂದರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸನ್ಮಾನಿತರಾಗಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಲಂಬಾಣಿ ಸಮಾಜವು ಬಹಳಷ್ಟು ಮುಂದಿದೆ. ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಕೈಗೊಂಡು ಸಮಾಜವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು. ಶೀಘ್ರದಲ್ಲೇ ದೂಡಾದಿಂದ ಸಿಎ ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಿದ್ದು, ಸಮಾಜದಿಂದ ಅರ್ಜಿ ಸಲ್ಲಿಸಬಹುದು ಎಂದರು. ಮಾಜಿ ಶಾಸಕ ಬಸವರಾಜನಾಯ್ಕ ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಸಮಾಜದಿಂದ ಐಎಎಸ್ ಹಾಗೂ ಕೆೆಎಎಸ್ ತರಬೇತಿ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಬೇಕು ಎಂದರು. ಜಿಲ್ಲಾ ಬಂಜಾರ ಸೇವಾ ಸಂಘದ ಅಧ್ಯಕ್ಷ ಎಸ್.ನಂಜಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸೇವಾಲಾಲ್ ಮಹಾಮಠ ಸಮಿತಿ ಅಧ್ಯಕ್ಷ ಹೀರಾನಾಯ್ಕ, ಧರ್ಮದರ್ಶಿ ಬೋಜ್ಯಾನಾಯ್ಕ, ಅರೇಹಳ್ಳಿಯ ಡಾ.ವಿಷ್ಣುವರ್ಧನ್, ನಿವೃತ್ತ ಇಂಜಿನಿಯರ್ ಜಿ.ಆರ್.ದೇವೇಂದ್ರನಾಯ್ಕ, ತಾಂಡಾ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜಾನಾಯ್ಕ, ಮುಖಂಡರಾದ ತಾವರ‌್ಯಾನಾಯ್ಕ, ವಕೀಲ ಮಲ್ಲೇಶ್‌ನಾಯ್ಕ, ಕುಬೇರನಾಯ್ಕ, ಬಾಂಬೆ ಕುಮಾರ್‌ನಾಯ್ಕ, ಕವಿತಾ ಚಂದ್ರಶೇಖರ್ ಇತರರು ಇದ್ದರು.