ಮೇನಲ್ಲಿ ವೀರಶೈವ ಲಿಂಗಾಯತ ಮಹಾಸಂಗಮ

dvg-Renukacharya_20250315233936514.jpg
Published on

ದಾವಣಗೆರೆ :  ವೀರಶೈವ ಲಿಂಗಾಯತ ಮಹಾಸಂಗಮ ಸಮಾವೇಶವನ್ನು ಮೇ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.  ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಮಾವೇಶದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.  ಕೆಲವು ದುಷ್ಟ ಶಕ್ತಿಗಳು ಸಮಾಜವನ್ನು ಒಡೆಯುವ ಪ್ರಯತ್ನ ನಡೆಸಿವೆ. ಆದ್ದರಿಂದ ಸಮಾಜ ಜಾಗೃತವಾಗಬೇಕಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಸೇರಿ ನಮ್ಮ ಸಮಾಜದ 9 ಜನರು ಮುಖ್ಯಮಂತ್ರಿಗಳಾಗಿದ್ದು ಅವರೆಲ್ಲರಿಗೂ ತೊಂದರೆ ನೀಡಲಾಗಿದೆ. ಒಗ್ಗಟ್ಟಿನ ಮೂಲಕ ಅಂಥ ಪ್ರಯತ್ನಗಳನ್ನು ತಡೆಯಬೇಕಿದೆ ಎಂದರು.  ಈಗಾಗಲೇ 17 ಜಿಲ್ಲೆಗಳಲ್ಲಿ ಸಮಾವೇಶದ ಪೂರ್ವಭಾವಿ ಸಭೆಗಳಾಗಿವೆ. ಮುಖಂಡರ ಜತೆಗೆ ಚರ್ಚಿಸಲಾಗಿದೆ. ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಸಮಾವೇಶ ನಡೆಸುವುದು ನಿಶ್ಚಿತ ಎಂದು ಹೇಳಿದರು.  ಶಾಸಕ ಬಸನಗೌಡ ಪಾಟೀಲ ಅವರನ್ನು ಬಲಿಪಶು ಮಾಡುವ ಪ್ರಯತ್ನ ನಡೆದಿದೆ, ಅದಕ್ಕೆ ಅವರು ಬಲಿಯಾಗಬಾರದು. ಸಮಾಜಮುಖಿಯಾಗಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.  ಇದೇ ವೇಳೆ ಅವರು ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ವಾಗ್ದಾಳಿ ನಡೆಸಿದರು.  ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್, ಎನ್. ರಾಜಶೇಖರ್, ಬಿ.ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಧನಂಜಯ್ ಕಡ್ಲೇಬಾಳ್, ಚಂದ್ರಶೇಖರ್ ಪೂಜಾರ್, ಕೊಟ್ರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net