

ದಾವಣಗೆರೆ : ನಾನು ಎಂದಿಗೂ ಬಿಜೆಪಿ ಕಟ್ಟಾಳು.. ಇದನ್ನು ಎದೆ ಬಗೆದು ತೋರಿಸಬೇಕಾ? ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿ. ಜಿಲ್ಲೆಯ ಜನರು ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬೇಕೆಂದು ಬಯಸಿದ್ದಾರೆ. ಕಾದು ನೋಡೋಣ, ಕಾಲಾಯ ತಸ್ಮೈ ನಮಃ ಎಂದು ತಿಳಿಸಿದರು.
ನಾನು ದೇಶಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಹಾಗೂ ರಾಜ್ಯಕ್ಕೆ ಬಿ.ಎಸ್.ಯಡಿಯೂರಪ್ಪ ಬೇಕು ಎಂದು ಬಯಸಿದ್ದೇನೆ. ಸಂಸದ ಸಿದ್ದೇಶ್ವರ್ ವಿರುದ್ಧ ಮಾತನಾಡುತ್ತಿಲ್ಲ ಹಾಗೂ ಲೋಕಸಭಾ ಅಭ್ಯರ್ಥಿ ಎಂದು ಟಾಂ ಟಾಂ ಹೊಡೆಯುತ್ತಿಲ್ಲ ಎಂದರು.
ಲೋಕಸಭಾ ಚುನಾವಣೆಗೆ ಯಾರು ಸ್ಪರ್ಧೆ ಮಾಡಬೇಕು ಎಂದು ಇನ್ನೂ ನಿರ್ಧಾರ ಆಗಿಲ್ಲ. ನನ್ನ ಸಾಮರ್ಥ್ಯ ಮತ್ತು ಶಕ್ತಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಗೊತ್ತಿದೆ ಎಂದು ಹೇಳಿದರು.
ನಾನು ರಾಜಕಾರಣದಲ್ಲಿ ರೆಡಿಮೇಡ್ ಫುಡ್ ಅಲ್ಲ. ಚಿಕ್ಕವನಿದ್ದಾಗಲೇ ಜನತಾ ಪಕ್ಷದ ಪರ ಪ್ರಚಾರ ಮಾಡಿದವನು. ಅನೇಕ ಕನ್ನಡಪರ ಚಳವಳಿ ಹಾಗೂ ರೈತರ ಹೋರಾಟಗಳಲ್ಲಿ ಪಾಲ್ಗೊಂಡವನು. 1990ರಲ್ಲಿ ರಾಮಜ್ಯೋತಿ ಬಂದಂತಹ ಸಂದರ್ಭದಲ್ಲಿ ಬಿಜೆಪಿಗೆ ಪ್ರವೇಶ ಮಾಡಿದ್ದೇನೆ. ಸ್ವತಃ ಹೋರಾಟ ನಡೆಸಿ ಜೈಲುವಾಸವನ್ನು ಅನುಭವಿಸಿದ್ದೇನೆ ಎಂದರು.
ರಾಜಕಾರಣದಲ್ಲಿ ನಿನ್ನೆ ಮೊನ್ನೆ ಬಂದವರ ಹೇಳಿಕೆಗೆ ಮಹತ್ವ ನೀಡುವುದಿಲ್ಲ ಎಂದು ವಿಪ ಸದಸ್ಯ ನವೀನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣ ನನಗೆ ಹೊಸದಲ್ಲ. ರಾಜಕಾರಣ ಎಂಬುದು ನಿಂತ ನೀರಲ್ಲ. ಮನೆಯಲ್ಲಿ ಕುಳಿತು ದೇವರ ಮುಂದೆ ಜಪ ಮಾಡಿದರೆ ಪಕ್ಷದ ಸಂಘಟನೆ ಆಗದು. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಕೆಲಸ ಮಾಡಿದಾಗ ಸಂಘಟನೆ ಸಾಧ್ಯವೆಂದರು.
ಭದ್ರಾ ನಾಲೆಗೆ ನೀರು ಹರಿಸಬೇಕು ಹಾಗೂ ಅಡಕೆ ಕೊಳೆ ರೋಗಕ್ಕೆ ಪರಿಹಾರ ನೀಡಬೇಕು ಎಂದು ಆಡಳಿತ ಪಕ್ಷದವರ ಮನೆಗಳಿಗೆ ಭೇಟಿ ನೀಡಿದರೆ ತಪ್ಪೇನು ಇಲ್ಲ. ಟೀಕೆಗಳಿಗೆ ಉತ್ತರಿಸುವುದಿಲ್ಲ. ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಿವಶಂಕರಪ್ಪ ಅವರು ಕಾಂಗ್ರೆಸ್‌ಗೆ ಬನ್ನಿ ಎಂದು ಕರೆದಿಲ್ಲ ಎಂದು ಹೇಳಿದರು.