

ನ್ಯಾಮತಿ : ಸಮಾಜದ ಉದ್ಧಾರವೇ ಮಹಾತ್ಮರ ಜೀವನದ ಪರಮ ಗುರಿಯಾಗಿದೆ ಎಂದು ನಾಗವಂದ ಹೊರಗಿನ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲ ಸ್ವಾಮೀಜಿ ಬೃಹನ್ಮಠದಲ್ಲಿ ಲೋಕ ಕಲ್ಯಾಣಾರ್ಥ ಹಮ್ಮಿಕೊಂಡಿರುವ ಜಪ ತಪದ ಜತೆಗೆ ಮಹಾ ಪೂಜಾ ಮೌನಾನುಷ್ಠಾನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಜಂಗಮ ವಟುಗಳು ಹಾಗೂ ಅಸಕ್ತ ಭಕ್ತರಿಗೆ ಶಿವದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಸಾಧು ಸಂತರ ಅನುಷ್ಠಾನ, ತಪಃಶಕ್ತಿ ಲೋಕ ಕಲ್ಯಾಣಕ್ಕೆ ಬಳಕೆಯಾಗುತ್ತದೆ. ಅನುಷ್ಠಾನದಂತಹ ಕಾರ್ಯದಿಂದ ಲಭಿಸುವ ಪುಣ್ಯ ಫಲವು ಭಕ್ತರಿಗೆ ದೊರೆತಾಗ ಸಕಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಾಗೆಯೇ ಮನುಷ್ಯನ ಶರೀರವನ್ನು ಮಂತ್ರಪಿಂಡವಾಗಿ ಪರಿವರ್ತಿಸುವ ಈ ಶಿವದೀಕ್ಷಾ ಹಂತವು ಅತಂತ್ಯ ಮಹತ್ವದ್ದಾಗಿದೆ ಎಂದರು. ವೀರಶೈವ ಧರ್ಮ ಪರಂಪರೆಯಲ್ಲಿ ಶಿವದೀಕ್ಷೆಯು ದೀಕ್ಷಾರ್ಥಿಯ ಜೀವನವನ್ನೇ ಬದಲಿಸಬಲ್ಲದು. ಶಿವದೀಕ್ಷಾ ಸಂಸ್ಕಾರದಿಂದ ಮಾನವ ಜಂಗಮನಾಗುತ್ತಾನೆ ಎಂದು ಹೇಳಿದರು. ಗೋವಿನಕೋವಿ ಹಾಲಸ್ವಾಮೀಜಿ ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಮಾತನಾಡಿ, ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳ ಮೇರು ಮೆಟ್ಟಿಲುಗಳನ್ನೇರಿ ಶಿವ ಸಾನ್ನಿಧ್ಯದ ಸಾಕ್ಷಾತ್ಕಾರ ಸಂಪಾದನೆಯ ಗುರಿ ಮುಟ್ಟುವಲ್ಲಿ ಬೇಕಾಗುವ ಮಾರ್ಗದರ್ಶನವನ್ನು ಸಿದ್ಧಾಂತ ಶಿಖಾಮಣಿ ಸಾಧಕರಿಗೆ ಒದಗಿಸುತ್ತದೆ ಎಂದರು. ಧರ್ಮ ಎನ್ನುವುದು ಸೈದ್ಧಾಂತಿಕ, ಕ್ರಮಬದ್ಧ ಜೀವನ ವಿಧಾನ. ನಡೆ-ನುಡಿ, ಬರಹ-ಬದುಕು, ಮಾತು-ಕೃತಿ ಉತ್ತಮ ಗುಣ, ಆಚರಣೆಗಳಿಂದ ಶ್ರೇಷ್ಠರಾದರೆ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರು. ಪೂರ್ವ ಜನ್ಮದ ಫಲದಿಂದ ಈ ಜನ್ಮದಲ್ಲಿ ಮನುಷ್ಯರಾಗಿ ಹುಟ್ಟಿದ್ದೇವೆ. ಮನುಕುಲದ ಶ್ರೇಷ್ಠತೆ ಅರ್ಥಮಾಡಿಕೊಂಡು ಸಾರ್ಥಕ ಜೀವನಕ್ಕಾಗಿ ಉತ್ತಮ ನಡೆ, ನುಡಿ, ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕಿದೆ ಎಂದು ಹೇಳಿದರು. ಬೇಡಜಂಗಮ ಸಮಾಜ ಸೇವಾ ಸಮಿತಿಯ ಹೊನ್ನಾಳಿ ತಾಲೂಕು ಅಧ್ಯಕ್ಷ ಬೈರನಹಳ್ಳಿ ಪಂಚಾಕ್ಷರಯ್ಯ, ಕಾರ್ಯದರ್ಶಿ ಕುಳಗಟ್ಟೆ ರುದ್ರಸ್ವಾಮಿ, ಮಾಧ್ಯಮ ವಕ್ತಾರ ಎಂ.ಎಸ್. ಶಾಸ್ತ್ರೀಹೊಳೆಮಠ್, ಹಾಲಸ್ವಾಮಿ ಸೇವಾ ಸಮಿತಿ ಕಾರ್ಯದರ್ಶಿ ವಿ.ಎಚ್. ರುದ್ರೇಶ್ ಮಾತನಾಡಿದರು. ಹಾಲಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಎಚ್. ಪಾಲಕ್ಷಪ್ಪಗೌಡ್ರು, ಪದಾಧಿಕಾರಿಗಳಾದ ಗಂಗಣ್ಣ, ಬೇಡ ಜಂಗಮ ಸಮಾಜ ಸೇವಾ ಸಮಿತಿಯ ಬೆನಕನಹಳ್ಳಿ ಬಸವರಾಜಯ್ಯ, ಕ್ಯಾಸಿನಕೆರೆ ರುದ್ರೇಶ್, ಪುರೋಹಿತ ವರ್ಗದವರು, ಇತರರು ಹಾಜರಿದ್ದರು.