ಪರಿಪೂರ್ಣತೆಯೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ

swamiji.jpg
Published on

ದಾವಣಗೆರೆ : ಮನುಷ್ಯನನ್ನು ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.  ನಗರದ ಅಭಿನವ ರೇಣುಕ ಮಂದಿರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.  ಸಮಸ್ತ ಜನರ ಭೋಗ, ಮೋಕ್ಷಗಳಿಗೆ ಧರ್ಮವೇ ಮೂಲ. ಸತ್ಯ ಮತ್ತು ಪ್ರಾಮಾಣಿಕತೆಗಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ. ಅಂತರಂಗ ಬಹಿರಂಗ ಶುದ್ಧಗೊಳ್ಳಬೇಕೆಂಬ ವೀರಶೈವ ಧರ್ಮದ ಧ್ವನಿ ಅರ್ಥಪೂರ್ಣವಾದುದು. ಇವೆರಡೂ ಪರಿಶುದ್ಧಗೊಳಗೊಳ್ಳಲು ಗುರುವಿನ ಸಂಸ್ಕಾರ ಪಡೆದು ಸನ್ಮಾರ್ಗದಲ್ಲಿ ಸಾಗಿದರೆ ಜೀವನ ಸಾರ್ಥಕಗೊಳ್ಳುವುದು ಎಂದರು.  ಭೌತಿಕ ಬದುಕು ಸುಖ-ದುಃಖಗಳಿಂದ ಕೂಡಿದ್ದು, ಯಾವುದೂ ಶಾಶ್ವತವಲ್ಲ. ಸುಖ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೇ ಸಮತೋಲನದಿಂದ ಬಾಳುವುದು ಮನುಷ್ಯನ ಧ್ಯೇಯವಾಗಬೇಕು. ಅಸುರೀ ಗುಣ ನಾಶಗೊಂಡು ದೈವೀ ಗುಣಗಳು ಪ್ರಾಪ್ತವಾಗಲು ಸಜ್ಜನರ ಒಡನಾಟದಲ್ಲಿ ಬಾಳುವುದು ಶ್ರೇಯಸ್ಕರ ಎಂದು ತಿಳಿಸಿದರು.  ಹರಿಹರದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಭಾರತ ಧರ್ಮದಿಂದ ಕೂಡಿದ ಪುಣ್ಯಭೂಮಿಯಾಗಿದ್ದು, ಒಂದು ಕಾಲದಲ್ಲಿ ಬಡ ರಾಷ್ಟ್ರವೆನಿಸಿದ್ದ ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮುಂದೊಂದು ದಿನ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಲಿದೆ ಎಂದು ಹೇಳಿದರು  ಸತ್ಯದಿಂದ ಕೂಡಿರುವುದೇ ಧರ್ಮ. ಈ ಮಾರ್ಗದಲ್ಲಿ ನಡೆದಾಗ ದೇವರು ನಮ್ಮನ್ನು ಕಾಪಾಡುತ್ತಾನೆ. ಅಂತಹ ಶಕ್ತಿ ನಮ್ಮ ಪುಣ್ಯಭೂಮಿಗಿದೆ. ಪ್ರಸ್ತುತ ಸಮೃದ್ಧ ಮಳೆಯಿಂದ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಹಲವೆಡೆ ಗಂಜಿ ಕೇಂದ್ರ ತೆರೆಯಲಾಗುತ್ತಿದೆ. ಗಂಗಾಮಾತೆ ಶಾಂತಳಾಗಲು ಪ್ರಾರ್ಥಿಸಬೇಕಿದೆ ಎಂದರು.  ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ.ಮುರುಗೇಶ ಮಾತನಾಡಿ, ಆಷಾಢ ಮಾಸದಲ್ಲಿ ವಿಪರೀತ ಮಳೆ ಹಾಗೂ ರೋಗ-ರುಜಿನ ಸಂಭವ ಹೆಚ್ಚಾಗಿದ್ದರಿಂದ ಹಿರಿಯರು ಯಾವುದೇ ಕಾರ್ಯಕ್ರಮ ನಡೆಸುತ್ತಿರಲಿಲ್ಲ. ಆದರೆ ಗುರುಪೂರ್ಣಿಮೆ, ಜಗನ್ನಾಥ ರಥಯಾತ್ರೆ, ಅಮರನಾಥ ಯಾತ್ರೆ ಸೇರಿ ಅನೇಕ ಧಾರ್ಮಿಕ ಕಾರ್ಯಕ್ರಮ ಈ ಮಾಸದಲ್ಲೇ ಜರುಗುತ್ತವೆ ಎಂದು ತಿಳಿಸಿದರು.  ಮಲೆಬೆನ್ನೂರಿನ ಕೈಗಾರಿಕೋದ್ಯಮಿ ಬಿ.ಚಿದಾನಂದಪ್ಪ ಅವರಿಗೆ ಧರ್ಮ ರತ್ನಾಕರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.  ಶ್ರೀ ವೀರಭದ್ರೇಶ್ವರ ಸಹಸ್ರ ನಾಮ ಕೃತಿಯನ್ನು ಶಾಸಕ ಹರೀಶ್ ಬಿಡುಗಡೆಗೊಳಿಸಿದರು. ಮಳಲಿಮಠ ನಾಗಭೂಷಣ ಶಿವಾಚಾರ್ಯ ಶ್ರೀ ಉಪದೇಶಾಮೃತ ನೀಡಿದರು. ಆಲೂರ ಹಿರೇಮಠದ ಸಿದ್ಧಲಿಂಗ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ದೇವರಮನೆ ಶಿವಕುಮಾರ್ ಇತರರು ಇದ್ದರು.  ಬಿಜೆಪಿ ಮುಖಂಡ ಕೊಂಡಜ್ಜಿ ಜಯಪ್ರಕಾಶ್, ದೇವರಾಜ ಶೀಲವಂತ, ಕೆ.ತಿಪ್ಪೇಶ್, ಹುಲಿಕಟ್ಟಿ ರಾಜೇಶ್ ಇತರರು ಗುರುರಕ್ಷೆ ಸ್ವೀಕರಿಸಿದರು. ಗಿರೀಶ ದೇವರಮನೆ  ಸ್ವಾಗತಿಸಿದರು. ಉಪನ್ಯಾಸಕಿ ಸೌಭಾಗ್ಯ ಹಿರೇಮಠ ನಿರೂಪಿಸಿದರು.  ಬೆಳಗ್ಗೆ ಸಭಾಂಗಣದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಸಹಸ್ರಾರು ಜನರು ಪಾಲ್ಗೊಂಡು ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು.  

 *ಕೋಟ್  
ಆಷಾಢ ಒಂದು ಶುಭ ಮಾಸವಾಗಿದ್ದು, ದೇವರ ಪೂಜೆಗೆ ಯಾವುದೂ ಅಶುಭವಲ್ಲ. ಆದರೆ, ನಮ್ಮ ಮನಸ್ಸಿನ ಭಾವನೆ ಪರಿಶುದ್ಧವಾಗಿರಬೇಕು. ಆಗ ಮಾತ್ರ ಎಲ್ಲರಿಗೂ ಒಳ್ಳೆಯದಾಗುತ್ತದೆ.   ಯಶವಂತರಾವ್ ಜಾಧವ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net