ಐತಿಹಾಸಿಕ ಕಾದಂಬರಿಗಳು ಸಂಸ್ಕೃತಿಯ ಪ್ರತಿಬಿಂಬ

dvg-novel.jpg
Published on

ದಾವಣಗೆರೆ : ಐತಿಹಾಸಿಕ ಕಾದಂಬರಿಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ನಗರದಲ್ಲಿ ಶನಿವಾರ, ಲೇಖಕ ಪಾಪುಗುರು ರಚನೆಯ, ಉಷಾ ಪ್ರಕಾಶನದಿಂದ ಹೊರ ಬರುತ್ತಿರುವ, ಸೂಳೆಕೆರೆ ಕುರಿತಾದ ‘ಶಾಂತಾದೇವಿ’ ಐತಿಹಾಸಿಕ ಕಾದಂಬರಿಯ ಮುಖಪುಟ ಅನಾವರಣಗೊಳಿಸಿ ಮಾತನಾಡಿದರು.  ಸೂಳೆಕೆರೆ ನಮ್ಮ ಜಿಲ್ಲೆಯ ಐತಿಹಾಸಿಕ ಹೆಮ್ಮೆ. ಇದು ಈ ಭಾಗದ ರೈತರಿಗೆ ನೀರಿನ ಜತೆಗೆ ನಮ್ಮೆಲ್ಲರ ಸಾಂಸ್ಕೃತಿಕ ಪ್ರತಿಷ್ಠೆಯೂ ಹೌದು. ಇದು ಮಾನವ ನಿರ್ಮಿತ ಕೆರೆಯಾಗಿದ್ದು ಇದರ ಬಗ್ಗೆ ಅನೇಕ ಐತಿಹ್ಯಗಳಿವೆ. ಈ ಕೆರೆಯ ಕುರಿತು ಸಂಶೋಧನಾತ್ಮಕ ಕೃತಿ ಬೇಕಿತ್ತು. ಇದುವರೆಗೂ ಇಂತಹ ಪ್ರಯತ್ನ ನಡೆದಿಲ್ಲ. ಇದೊಂದು ಆಕರ ಗ್ರಂಥವಾಗಿಯೂ ಉಳಿಯಲಿದೆ ಎಂದರು.  ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಸಾಹಿತ್ಯದ ಪ್ರಕಾರದಲ್ಲಿ ಕಾದಂಬರಿ ರಚನೆಯು ಸುದೀರ್ಘ ಕೆಲಸವಾಗಿದ್ದು ಅದರಲ್ಲೂ ಐತಿಹಾಸಿಕ ಕಾದಂಬರಿಗಳು ಆ ಪ್ರದೇಶದ ನೆಲ, ಜಲ, ಆರ್ಥಿಕತೆ, ಆಮದು, ರಫ್ತು, ಉತ್ಪಾದನೆ ಈ ಎಲ್ಲ ಮೂಲಗಳನ್ನು ಕಟ್ಟಿ ಕೊಡುವ ಮೂಲಕ ಅಲ್ಲಿನ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತವೆ ಎಂದು ಹೇಳಿದರು.  ಕೃತಿಯ ಲೇಖಕ ಪಾಪುಗುರು ಮಾತನಾಡಿ, ಈ ಕಾದಂಬರಿಯ ನಿರ್ಮಾಣಕ್ಕೆ ಸ್ಥಳ ಪುರಾಣ, ಜಾಗದ ಅನ್ವೇಷಣೆ, ಜನ ಸಂಪರ್ಕ ಮಾಡಿ ಸುದೀರ್ಘ ಸಮಯ ಮೀಸಲಿಟ್ಟಿದ್ದೇನೆ. ಆಳ ಅಧ್ಯಯನದ ನಂತರ ಹೊರ ಬರುತ್ತಿರುವ ಈ ಕಾದಂಬರಿ ಸೂಳೆಕೆರೆ ನಿರ್ಮಾಣದ ಬಗ್ಗೆ ಸಂಪೂರ್ಣ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡಲಿದೆ ಎಂದರು.  ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್, ಸಾಹಿತಿಗಳಾದ ಸಂತೇಬೆನ್ನೂರು ಫೈಜ್ನಟ್ರಾಜ್, ಸುಬ್ರಹ್ಮಣ್ಯ ಭದ್ರಾವತಿ, ಸನಾವುಲ್ಲಾ ನವಿಲೇಹಾಳ್, ಫಕೀರೇಶ ಆದಾಪುರ, ಮಹಮ್ಮದ್ ರಫಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net