

ದಾವಣಗೆರೆ : ಕಳೆದ ಒಂದು ತಿಂಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರದಲ್ಲಿ ಬ್ಯುಜಿಯಾಗಿದ್ದ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಬುಧವಾರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ನಿರಂತರ ಪ್ರವಾಸದಿಂದ ದಣಿದಿದ್ದ ಅವರು ಒಂದಿಷ್ಟು ವಿಶ್ರಾಂತಿಗೆ ಜಾರಿದರು. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆದರು, ಬಹಳ ದಿನಗಳ ನಂತರ ಒಟ್ಟಿಗೇ ಕುಳಿತು ಊಟ, ತಿಂಡಿ ಮಾಡಿದರು.
ಪ್ರಚಾರಕ್ಕೆ ಹೊರಡಬೇಕೆಂದರೆ ಅವರ ದಿನಚರಿ ಬೆಳಗಿನ ಜಾವ ಐದಾರು ಗಂಟೆಯಿಂದಲೇ ಆರಂಭವಾಗುತ್ತಿತ್ತು. ಸ್ನಾನ, ಪೂಜೆ, ತಿಂಡಿ ಮುಗಿಸುವ ಹೊತ್ತಿಗೆ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಭೇಟಿಗೆ ಬರುತ್ತಿದ್ದರು. ಅವರನ್ನೆಲ್ಲ ಮಾತನಾಡಿಸಿ ಪೂರ್ವನಿಗದಿತ ಕಾರ್ಯಕ್ರಮದಂತೆ ವಿಧಾನಸಭಾ ಕ್ಷೇತ್ರಗಳ ಕಡೆಗೆ ಪ್ರಯಾಣ ಬೆಳೆಸುತ್ತಿದ್ದರು. ಇದು ಅಭ್ಯರ್ಥಿಗಳ ಸಾಮಾನ್ಯ ದಿನಚರಿಯಾಗಿತ್ತು.
ಹಳ್ಳಿಗೆ ಹೋಗಿ ತೆರೆದ ವಾಹನ ಏರುವ ಹೊತ್ತಿಗೆ ಬಿಸಿಲೂ ಏರಿರುತ್ತಿತ್ತು. ಊರೂರಿನಲ್ಲಿ ಭಾಷಣ ಮಾಡಿ ಮುಂದಿನ ಗ್ರಾಮದ ಕಡೆ ಮುಖ ಮಾಡುತ್ತಿದ್ದರು. ಅಭಿಮಾನಿಗಳ ಮನೆಯಲ್ಲಿ ಮಧ್ಯಾಹ್ನದ ಭೋಜನ ಸವಿದು ಮತ್ತೆ ಮುಂದಿನೂರಿಗೆ ತೆರಳುತ್ತಿದ್ದರು. ಆ ದಿನಕ್ಕೆ ನಿಗದಿಯಾದ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದರು. ಪ್ರಚಾರ ಮುಗಿಸಿ ಮನೆ ಸೇರುವ ಹೊತ್ತಿಗೆ ತಡವಾಗಿರುತ್ತಿತ್ತು.
ಮತದಾನ ಮುಕ್ತಾಯವಾದ ನಂತರ ಅಭ್ಯರ್ಥಿಗಳಿಗೆ ಒಂದಿಷ್ಟು ಬಿಡುವು ಸಿಕ್ಕಿದೆ. ಇನ್ನೇನಿದ್ದರೂ ಜೂನ್ 4ರಂದು ಫಲಿತಾಂಶ ಪ್ರಕಟವಾಗುವ ವರೆಗೆ ಕಾಯಬೇಕಿದೆ.
...
* ಯೋಗ, ಪೂಜೆ, ಕಾರ್ಯಕರ್ತರ ಭೇಟಿ
ನಗರದ ಜಿಎಂಐಟಿ ಅತಿಥಿಗೃಹದಲ್ಲಿದ್ದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಬುಧವಾರದ ದಿನಚರಿ ಬೆಳಗ್ಗೆ 6 ಗಂಟೆಗೆ ಯೋಗದೊಂದಿಗೆ ಆರಂಭವಾಯಿತು. ನಂತರ ಮೊಬೈಲ್‌ನಲ್ಲಿ ಬಂದ ಮೆಸೇಜ್‌ಗಳನ್ನು ನೋಡಿದರು. 8.30ಕ್ಕೆ ಪೂಜೆ ಮಾಡಿ ಮಕ್ಕಳೊಂದಿಗೆ ತಿಂಡಿ ಸೇವಿಸಿದರು. ಬಂದಿದ್ದ ಕಾರ್ಯಕರ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮತದಾನ ಎಲ್ಲೆಲ್ಲಿ ಹೇಗೆ ಆಗಿದೆ, ನಮಗೆ ಎಲ್ಲಿ ಪ್ಲಸ್ ಆಗಬಹುದು ಇತ್ಯಾದಿ ಮಾಹಿತಿಗಳನ್ನು ಕೇಳಿ ಪಡೆದರು. ಪ್ರಚಾರಕ್ಕೆ ಹೋಗಬೇಕಾದ ಧಾವಂತ ಇರಲಿಲ್ಲ, ರಿಲ್ಯಾಕ್ಸ್ ಆಗಿ ಕಂಡುಬಂದರು.
...
* ಕುಟುಂಬದವರೊಂದಿಗೆ ಸಮಯ
ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲದಂತೆ ಓಡಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಬುಧವಾರ ಬಹಳ ರಿಲ್ಯಾಕ್ಸ್ ಆಗಿದ್ದು ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆದರು.
‘ಬೆಳಗ್ಗೆ ಎದ್ದು ಒಂದು ಕಪ್ ಕಾಫಿ ಕುಡಿದೆ. ಆರಾಮವಾಗಿ ಒಂದು ಗಂಟೆ ನ್ಯೂಸ್ ಪೇಪರ್‌ಗಳನ್ನು ಓದಿದೆ. ನಿಧಾನವಾಗಿ ಪೂಜೆ ಮುಗಿಸಿದೆ. ಕ್ಯಾನ್‌ವಾಸ್‌ಗೆ ಹೋಗುವಾಗ ತಿಂಡಿ ತಿಂದೇ ಹೊರಡುತ್ತಿದ್ದೆ, ಇಂದು ತಿಂಡಿ ತಿನ್ನಲಿಲ್ಲ’ ಎಂದು ಪ್ರಭಾ ಮಲ್ಲಿಕಾರ್ಜುನ್ ತಮ್ಮ ದಿನಚರಿಯನ್ನು ವಿವರಿಸಿದರು.
ಇಷ್ಟು ದಿನ ರಾಜಕೀಯ, ಪ್ರಚಾರದ ಬಗ್ಗೆಯೆ ಚರ್ಚೆಯಾಗುತ್ತಿತ್ತು. ಸಂಜೆ ಕುಟುಂಬದ ಸದಸ್ಯರ ಜತೆಗೆ ಒಂದು ಗಂಟೆಗೂ ಹೆಚ್ಚು ಸಮಯ ಕಳೆದು ಪ್ರಸಕ್ತ ವಿದ್ಯಮಾನಗಳು, ಜಾಗತಿಕ ಬೆಳವಣಿಗೆಗಳು, ಸಾಮಾಜಿಕ ಜಾಲತಾಣ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದೆವು ಎಂದು ತಿಳಿಸಿದರು. ಇದರ ಜತೆಗೆ ಮನೆಗೆ ಬಂದಿದ್ದ ಜನರೊಂದಿಗೆ ಮಾತನಾಡಿದರು.
...
* ಮುಖಂಡರೊಂದಿಗೆ ಚರ್ಚೆ
ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್, ಇಡೀ ದಿನ ತಮ್ಮನ್ನು ಭೇಟಿ ಮಾಡಲು ಬಂದಿದ್ದ ಮುಖಂಡರು, ಕಾರ್ಯಕರ್ತರ ಜತೆಗೆ ಚರ್ಚೆಯಲ್ಲಿ ತೊಡಗಿದ್ದರು. ಚುನಾವಣಾ ಲೆಕ್ಕಾಚಾರ, ಮತದಾನದ ಕುರಿತು ಮಾಹಿತಿ ಪಡೆದರು. ಅಪಘಾತದಲ್ಲಿ ಮೃತಪಟ್ಟ ಯುವತಿಯ ಮನೆಗೆ ತೆರಳಿ ಆ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಪ್ರಚಾರಕ್ಕೆ ಹೋಗುವಾಗ ಬೇಗನೆ ಏಳಬೇಕಿತ್ತು, ಇಂದು ಸ್ವಲ್ಪ ನಿಧಾನವಾಗಿ ಎದ್ದೆ. ವಿವಿಧ ಕ್ಷೇತ್ರಗಳಿಂದ ಜನರು ಬಂದು ಭೇಟಿ ಮಾಡಿದರು. ಅವರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದೆ ಎಂಂದು ವಿನಯ್ ಕುಮಾರ್ ತಿಳಿಸಿದರು.