ದೇವದಾಸಿ ಪದ್ಧತಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಲು ಸೂಚನೆ

dvg-sadana-samiti.jpg
Published on

ದಾವಣಗೆರೆ : ಸಾಮಾಜಿಕ ಪಿಡುಗಾಗಿರುವ ದೇವದಾಸಿ ಪದ್ಧತಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಸೂಚನೆ ನೀಡಿದರು.  ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.  ಇನ್ನೂ ಕೆಲ ತಳ ಸಮುದಾಯದಲ್ಲಿ ಮುತ್ತು ಕಟ್ಟುವ ಪದ್ಧತಿ ಜಾರಿಯಲ್ಲಿದೆ ಎಂಬ ಮಾಹಿತಿಯಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.  ಎಲ್ಲ ಅನುಷ್ಠಾನ ಇಲಾಖೆಯಲ್ಲಿ ಕಾಮಗಾರಿ, ಸೇವಾ ಟೆಂಡರ್‌ಗಳನ್ನು ಕರೆಯುವಾಗ 1 ಕೋಟಿ ರೂ. ಒಳಗಿನ ಮೊತ್ತದ ಕಾಮಗಾರಿಗೆ ಮೀಸಲಾತಿ ನೀಡುವುದು ಕಡ್ಡಾಯವಾಗಿದೆ. ಆದರೆ ಕೆಲವು ಇಲಾಖೆಗಳಲ್ಲಿ ಪ್ಯಾಕೇಜ್ ಮೂಲಕ ಹಲವು ಕಾಮಗಾರಿಗಳನ್ನು ಒಂದರಲ್ಲಿ ಸೇರಿಸಿ ಕರೆಯಲಾಗುತ್ತಿದೆ. ಕಾಯ್ದೆಯನ್ವಯ ಇದು ತಪ್ಪಾಗಿದ್ದು ಅಂತಹ ಇಂಜಿನಿಯರ್‌ಗಳ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದರು.  ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು ತಳ ಸಮುದಾಯದ ಮಕ್ಕಳೇ ಆಗಿದ್ದು, ಅಂಥ ಶಾಲೆಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಬೇಕು. ಸ್ಮಾರ್ಟ್ ಕ್ಲಾಸ್ ನಡೆಸಬೇಕು. ಇಸ್ರೋ ಸಂಸ್ಥೆಯ ಒಡಂಬಡಿಕೆಯಂತೆ ಆನ್‌ಲೈನ್ ಕ್ಲಾಸ್ ಕೊಡಿಸಬೇಕು ಎಂದು ಹೇಳಿದರು.  ಯಾವುದೇ ಖಾಸಗಿ ಶಾಲೆ, ಕಾಲೇಜುಗಳು ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳನ್ನು ಪ್ರವೇಶದ ವೇಳೆ ಶುಲ್ಕ ಕಟ್ಟಿಲ್ಲವೆಂದು ಹೊರಗಿಡಬಾರದು ಮತ್ತು ಪ್ರವೇಶ ನಿರಾಕರಿಸುವಂತಿಲ್ಲ. ಸರ್ಕಾರದಿಂದ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಇಂತಹ ಪ್ರಕರಣಗಳು ಕಂಡುಬಂದರೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನದ ಮೂಲಕ ಪ್ರಕರಣಗಳನ್ನು ನೇರವಾಗಿ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ...  * ಸ್ಮಶಾನಕ್ಕೆ ಜಾಗ ಮೀಸಲಿರಿಸಲು ಸೂಚನೆ  ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಜಾಗ ಇರಬೇಕು. ಇಲ್ಲಿ ಎಲ್ಲ ಜಾತಿ, ಜನಾಂಗದವರಿಗೂ ಅವಕಾಶ ಇದ್ದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶವ ಸಂಸ್ಕಾರಕ್ಕೆ ಜಾಗ ನೀಡದಿದ್ದಲ್ಲಿ ಸರ್ಕಾರಿ ಅಥವಾ ಖಾಸಗಿ ಜಾಗವನ್ನು ಖರೀದಿಸಿ ಸ್ಮಶಾನಕ್ಕೆ ಮೀಸಲಿರಿಸಲು ಸೂಚನೆ ನೀಡಿದರು.  ಈ ವೇಳೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಪರಿಶಿಷ್ಟರು ಜಾಗವಿಲ್ಲದೇ ರಸ್ತೆ ಬದಿಯಲ್ಲಿ ಶವ ಸಂಸ್ಕಾರ ಮಾಡುವಂತಹ ನಿದರ್ಶನಗಳಿವೆ ಎಂದಾಗ, ಅಂತಹ ಗ್ರಾಮಗಳನ್ನು ಪಟ್ಟಿ ಮಾಡಿ ಕೂಡಲೇ ಸ್ಮಶಾನಕ್ಕೆ ಜಾಗ ಗುರುತಿಸುವಂತೆ ತಿಳಿಸಿದರು.  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net