ರೇಬಿಸ್ ನಿರ್ಮೂಲನೆಗೆ ಲಸಿಕಾ ಅಭಿಯಾನ

rabies-vaccine.jpg
Published on

ರಮೇಶ ಜಹಗೀರದಾರ್ ದಾವಣಗೆರೆ  : ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಶುಪಾಲನಾ ಇಲಾಖೆಯು ರೇಬಿಸ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜತೆಗೆ, ವಿಶ್ವ ರೇಬಿಸ್ ದಿನವಾದ ಸೆ. 28 ರಿಂದ ಅ. 27 ರ ವರೆಗೆ ಸಾಮೂಹಿಕ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ.  ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು, ಆರೋಗ್ಯ, ಶಿಕ್ಷಣ ಇನ್ನಿತರ ಇಲಾಖೆಗಳ ಸಹಯೋಗ ಪಡೆದು ಸಂಘಟಿತ ಪ್ರಯತ್ನದ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಲು ಪಶುಪಾಲನಾ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.  ಜಿಲ್ಲೆಯಲ್ಲಿ 50 ಸಾವಿರದಷ್ಟು ಬೀದಿ ನಾಯಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ನಾಯಿ ಕಚ್ಚಿದ ಪ್ರಕರಣಗಳು ಹೆಚ್ಚಾಗುತ್ತಿವೆ. ನಾಲ್ಕು ತಿಂಗಳ ಹಿಂದೆ ನಗರದ 4 ವರ್ಷದ ಬಾಲಕಿಯೊಬ್ಬಳು ಆಟವಾಡುವಾಗ ಬೀದಿನಾಯಿ ದಾಳಿಗೆ ಒಳಗಾಗಿ, ಚಿಕಿತ್ಸೆ ಫಲಕಾರಿಯಾಗದೇ ಕಳೆದ ತಿಂಗಳು ಮೃತಪಟ್ಟಳು. ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಗ್ರಾಮದಲ್ಲಿ ಶನಿವಾರ ಮಗು ಸೇರಿ ಐವರ ಮೇಲೆ ಶ್ವಾನಗಳು ದಾಳಿ ಮಾಡಿವೆ.  ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 5776 ನಾಯಿ ಕಡಿತ ಪ್ರಕರಣಗಳು ಸಂಭವಿಸಿದ್ದವು. ಈ ವರ್ಷ ಆ. 15 ರ ವರೆಗೆ 6157 ಕೇಸ್‌ಗಳು ದಾಖಲಾಗಿವೆ!. ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ಇಂಥ ಪ್ರಕರಣಗಳ ಸಂಖ್ಯೆ ಜಾಸ್ತಿ ಇದೆ.  ಈ ಹಿನ್ನೆಲೆಯಲ್ಲಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ರೂಪಿಸಲಾಗಿದೆ. 23 ಸಾವಿರ ಡೋಸ್ ಲಸಿಕೆ ಪೂರೈಕೆಯಾಗಿದ್ದು ಅವುಗಳನ್ನು ಜಿಲ್ಲೆಯ 154 ಪಶು ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಬೆಕ್ಕುಗಳಿಗೂ ಲಸಿಕೆ ಹಾಕಲಾಗುವುದು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net