ಗುರುರಾಯರ ಆರಾಧನಾ ಮಹೋತ್ಸವ ಸುಸಂಪನ್ನ

dvg-rathotsava_20250812232425773.jpg
Published on

ದಾವಣಗೆರೆ :  ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವವು ಮಂಗಳವಾರ ಉತ್ತರಾರಾಧನೆಯೊಂದಿಗೆ ಸುಸಂಪನ್ನವಾಯಿತು.  ನಗರದ ದೀಕ್ಷಿತ್ ರಸ್ತೆ ರಾಯರ ಮಠದ ವತಿಯಿಂದ ಮಹಾ ರಥೋತ್ಸವ ನೆರವೇರಿತು. ರಥದಲ್ಲಿ ಪ್ರಹ್ಲಾದರಾಜರ ಮೂರ್ತಿ, ರಾಯರ ಉತ್ಸವ ವೃಂದಾವನ ಹಾಗೂ ಶ್ರೀ ಮಂತ್ರಾಲಯ ಪ್ರಭುಗಳು ರಚಿಸಿರುವ ‘ಶ್ರೀಮನ್ಯಾಯ ಸುಧಾ ಪರಿಮಳ’ ಗ್ರಂಥವನ್ನು ಇಡಲಾಗಿತ್ತು. ರಥವು ಮಠದಿಂದ ಹೊರಟು ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಪಿಬಿ ರಸ್ತೆ, ಜಯದೇವ ವೃತ್ತ ಮಾರ್ಗವಾಗಿ ಮಠಕ್ಕೆ ಮರಳಿತು.  ರಾಜಬೀದಿಗಳಲ್ಲಿ ಸಾಗುವಾಗ ‘ಹರಿ ಸರ್ವೋತ್ತಮ, ವಾಯು ಜೀವೋತ್ತಮ’, ‘ಹರೇ ಶ್ರೀನಿವಾಸ ಗುರೋ ರಾಘವೇಂದ್ರ’ ಎಂಬ ಘೋಷಣೆಗಳು ಮೊಳಗಿದವು. ರಾಘವೇಂದ್ರ ಸ್ತೋತ್ರವನ್ನು ಪಠಿಸಲಾಯಿತು. ಕೆಲವರು ವೇದ ಪಾರಾಯಣ ಮಾಡಿದರು. ಕೋಲಾಟ, ಭಜನೆ ಹಾಗೂ ನಾದಸ್ವರಗಳು ಮೇಳೈಸಿದ್ದರಿಂದ ರಥೋತ್ಸವ ಕಳೆಗಟ್ಟಿತ್ತು.  ಕಡೂರು ಪ್ರಾಣೇಶಾಚಾರ್, ವಾಚಸ್ಪತಿ ಆಚಾರ್, ಕೋಸ ಪ್ರಸನ್ನ ಕುಮಾರ್, ವಾಗೀಶಾಚಾರ್, ಎನ್.ಎಸ್. ರಾವ್, ಮಣ್ಣೂರು ನರಸಿಂಹಾಚಾರ್, ಡಾ.ಸಿ.ಕೆ. ಆನಂದತೀರ್ಥಾಚಾರ್, ಸಾಹುಕಾರ ಗುರುರಾಜ, ಸಮೀರಾಚಾರ್, ಸುಮತೀಂದ್ರ ನಾಡಿಗ, ನಿರಂಜನ, ಅನಿಲ್ ರಾಮಧ್ಯಾನಿ, ನರಗನಹಳ್ಳಿ ಶ್ರೀನಿವಾಸ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net