

ದಾವಣಗೆರೆ :
ಶ್ರೀ ಗುರುರಾಯರ ಮಧ್ಯಾರಾಧನೆ ಹಾಗೂ ಶ್ರೀಮಠದ ವಜ್ರ ಮಹೋತ್ಸವ ಅಂಗವಾಗಿ ನಗರದ ಪಿ.ಜೆ. ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಮಠದ ಆವರಣದಿಂದ ರಥೋತ್ಸವ ಆರಂಭವಾಯಿತು. ರಥದಲ್ಲಿ ಗುರುರಾಯರ ಗ್ರಂಥಗಳನ್ನು ಇರಿಸಲಾಗಿತ್ತು. ಪೂಜಾ, ಮಂಗಳಾರತಿ ನೆರವೇರಿಸಿ ವೇದವಾದ್ಯಗಳ ಘೋಷ ಮೊಳಗಿತು. ಭಾರತಿ ಭಜನಾ ಮಂಡಳಿ ಮಹಿಳಾ ತಂಡದವರು ಭಜನೆ ಮತ್ತು ದಾಸರ ಕೀರ್ತನೆಗಳನ್ನು ಹಾಡಿದರು.
ರಥೋತ್ಸವವು ಈಶ್ವರಮ್ಮ ಶಾಲೆ, ವನಿತಾ ಸಮಾಜ, ಹಾಗೂ ಶ್ರೀರಾಮ ಮಂದಿರದ ಮಾರ್ಗವಾಗಿ ಸಂಚರಿಸಿತು. ಅಪಾರ ಸಂಖ್ಯೆಯ ರಾಯರ ಭಕ್ತರು ಭಾಗಿಯಾದರು.
ಶ್ರೀಮಠದ ವ್ಯವಸ್ಥಾಪಕ ಸುತೀರ್ಥ ಕಟ್ಟಿ, ಡಾ. ವೆಂಕಟರಮಣ ಕಟ್ಟಿ, ರಾಮಗೋಪಾಲ್ ಕಟ್ಟಿ, ಪಂಡಿತ ಗೋಪಾಲಚಾರ್ ಮಣ್ಣೂರ್, ವೆಂಕಟೇಶಚಾರ್ ಮಣ್ಣೂರ್, ಜಯತೀರ್ಥಾಚಾರ್ ವಡೇರ್ , ಕೃಷ್ಣಾಚಾರ್ಯ ಮಣ್ಣೂರ್ ಅವರು ಚಾಲನೆ ನೀಡಿದರು.
ಮಧ್ಯಾಹ್ನ ಪಂಡಿತ ಪುರಂದರಾಚಾರ್ಯ ಹಯಗ್ರೀವ ಅವರಿಂದ ಪ್ರವಚನ, ರಾಯರಿಗೆ ಹಸ್ತೋದಕ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತ ಸಮುದಾಯಕ್ಕೆ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗೆ ಸುಪ್ರಭಾತ, ನೈರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಕೈಂಕರ್ಯ, ಅಷ್ಟೋತ್ತರ ಸೇವೆ ಕೈಗೊಳ್ಳಲಾಯಿತು. ಸಂಜೆ ಅಷ್ಟಾವಧಾನ ಸೇವೆ ನಡೆಯಿತು.
ದೀಕ್ಷಿತ್ ರಸ್ತೆಯ ಮಠದಲ್ಲಿ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ನಂತರ ಫಲ ಪಂಚಾಮೃತ, ಶ್ರೀಹರಿ ವಾಯುಸ್ತುತಿ ಪಾರಾಯಣ, ಶ್ರೀ ರಾಘವೇಂದ್ರ ಸ್ತೋತ್ರ, ಅಷ್ಟೋತ್ತರ ಪಾರಾಯಣ, ಶ್ರೀಮಠದಲ್ಲಿ ಕನಕಾಭಿಷೇಕ, ಪಾದಪೂಜೆ ನೆರವೇರಿದವು. ಪಂಡಿತರಿಂದ ಉಪನ್ಯಾಸ, ನಂತರ ಮಹಾ ನೈವೇದ್ಯ, ಮಂಗಳಾರತಿ ನಡೆದು ತೀರ್ಥ ಪ್ರಸಾದ ವಿತರಿಸಲಾಯಿತು.
ಸಂಜೆ ರಥೋತ್ಸವ, ಅಷ್ಟಾವಧಾನ. ನಂತರ ವಿದ್ವಾನ್ ಪ್ರತಿಮಾ ಜೋಶಿ ಮತ್ತು ತಂಡದವರಿಂದ ಹರಿದಾಸ ವಾಣಿ ಹಮ್ಮಿಕೊಳ್ಳಲಾಗಿತ್ತು.
….