

ದಾವಣಗೆರೆ : ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಭಾನುವಾರದಿಂದ ಆ. 12ರ ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರಾಯರ ಮಠಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ದೀಕ್ಷಿತ್ ರಸ್ತೆಯ ಮಠ ಹಾಗೂ ಪಿಜೆ ಬಡಾವಣೆಯ ಮಠದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೂರು ದಿನಗಳ ಉತ್ಸವದಲ್ಲಿ ಭಕ್ತರು ಪಾಲ್ಗೊಂಡು ಮಂತ್ರಾಲಯ ಪ್ರಭುಗಳ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ. ದೀಕ್ಷಿತ್ ರಸ್ತೆಯ ಮಠದಲ್ಲಿ ಶನಿವಾರದಿಂದಲೇ ಚಟುವಟಿಕೆಗಳು ಆರಂಭವಾಗಲಿವೆ. ಅಂದು ಸಂಜೆ 6 ರಿಂದ ಗೋಪೂಜೆ, ಧ್ವಜಾರೋಹಣ, ಲಕ್ಷ್ಮೀ ಪೂಜೆ, ಧಾನ್ಯ ಪೂಜೆ ಹಮ್ಮಿಕೊಳ್ಳಲಾಗಿದೆ. ಸಂಜೆ 6.30 ಕ್ಕೆ ರಥೋತ್ಸವ. 7 ಗಂಟೆಯಿಂದ ವಿದ್ವಾನ್ ರಾಜಗೋಪಾಲ ಭಾಗವತರ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರ ಪೂರ್ವಾರಾಧನೆಯಂದು ಸಂಜೆ 7ಕ್ಕೆ ನಮನ ಅಕಾಡೆಮಿಯ ಮಾಧವಿ ಗೋಪಾಲಕೃಷ್ಣ ಮತ್ತು ಶಿಷ್ಯ ವೃಂದದಿಂದ ‘ಕೃಷ್ಣ ವಿಲಾಸಂ’ ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ. ಸೋಮವಾರ ಮಧ್ಯಾರಾಧನೆಯಂದು ಸಂಜೆ 6ಕ್ಕೆ ರಥೋತ್ಸವ, ಅಷ್ಟಾವಧಾನ. ನಂತರ ವಿದ್ವಾನ್ ಪ್ರತಿಮಾ ಜೋಶಿ ಮತ್ತು ತಂಡದವರಿಂದ ಹರಿದಾಸ ವಾಣಿ ಹಮ್ಮಿಕೊಳ್ಳಲಾಗಿದೆ. ಉತ್ತರಾರಾಧನೆ ದಿನವಾದ ಮಂಗಳವಾರ ಬೆಳಗ್ಗೆ 10 ರಿಂದ ಮಹಾ ರಥೋತ್ಸವ. ಸಂಜೆ ಶುಭದಾ ಮತ್ತು ತಂಡದ 30 ಕಲಾವಿದರಿಂದ ವೀಣಾವಾದನದ ಸುಧೆ ಹರಿಯಲಿದೆ.