

ದಾವಣಗೆರೆ : ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಉತ್ತರಾರಾಧನೆಯೊಂದಿಗೆ ಗುರುವಾರ ಸುಸಂಪನ್ನವಾಯಿತು. ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಾಯರ ಮಠಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು ಗುರು ಸಾರ್ವಭೌಮರ ದರ್ಶನ ಪಡೆದು ಧನ್ಯತಾ ಭಾವ ಹೊಂದಿದರು. ಅವರ ಮಹಿಮೆಯನ್ನು ಕೊಂಡಾಡಿದರು. ಕೆ.ಬಿ. ಬಡಾವಣೆ ರಾಯರ ಮಠದಿಂದ ಉತ್ತರಾರಾಧನೆ ಪ್ರಯುಕ್ತ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಠದ ಬಳಿಯಿಂದ ಆರಂಭವಾಗಿ ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಪಿಬಿ ರಸ್ತೆ ಮೂಲಕ ಲಾಯರ್ ರಸ್ತೆ, ಜಯದೇವ ವೃತ್ತ ಮಾರ್ಗವಾಗಿ ಮಠಕ್ಕೆ ಮರಳಿತು. ಪುಷ್ಪಾಲಂಕೃತವಾಗಿದ್ದ ರಥದಲ್ಲಿ ಮಂತ್ರಾಲಯ ಪ್ರಭುಗಳು ರಚಿಸಿದ ‘ಶ್ರೀಮನ್ಯಾಯ ಸುಧಾ ಪರಿಮಳ’ ಗ್ರಂಥವನ್ನು ಇಡಲಾಗಿತ್ತು. ನಂದ ಕಿಶೋರ ಹಾಗೂ ಭಾರತಿ ಭಜನಾ ಮಂಡಳಿಯವರು ರಾಯರ ಸ್ತೋತ್ರ, ಹಾಡುಗಳನ್ನು ಹಾಡುವ ಮೂಲಕ ಭಕ್ತಿ ಸಮರ್ಪಿಸಿದರು. ಕಡೂರು ಪ್ರಾಣೇಶ್ ಆಚಾರ್, ಕೊ.ಸ. ಪ್ರಸನ್ನ ಕುಮಾರ್, ಕಂಪ್ಲಿ ಗುರುರಾಜ್ ಆಚಾರ್, ವಾಚಸ್ಪತಿ, ಸಿ.ಕೆ. ಆನಂದ ತೀರ್ಥಾಚಾರ್, ವೆಂಕಟೇಶ ನವರತ್ನ, ಕಂಪ್ಲಿ ಪ್ರಹ್ಲಾದ್, ನರಗನಹಳ್ಳಿ ಶ್ರೀನಿವಾಸ್, ರಾಘವೇಂದ್ರ ಕುಲಕರ್ಣಿ, ನಿರಂಜನ್ ರಥೋತ್ಸವದಲ್ಲಿ ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಶುಭದಾ ಮತ್ತು ತಂಡದ 30 ಕಲಾವಿದರಿಂದ ವೀಣಾವಾದನ ನಡೆಯಿತು. ...