ರಥವನೇರಿದ ಚಂದ್ರ, ರಾಘವೇಂದ್ರ...

dvg-rathotsava.jpg
Published on

ದಾವಣಗೆರೆ : ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವದ ಎರಡನೇ ದಿನವಾದ (ಮಧ್ಯಾರಾಧನೆ) ಬುಧವಾರ ನಗರದ ಪಿ.ಜೆ. ಬಡಾವಣೆ ರಾಯರ ಮಠದಲ್ಲಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.  ಮಠದ ಮುಂಭಾಗದ ಮುಖ್ಯ ಬೀದಿಯಿಂದ ಆರಂಭವಾದ ರಥೋತ್ಸವ ವಿಶ್ವಾಸ್ ಅಪಾರ್ಟ್‌ಮೆಂಟ್, ಪೊಲೀಸ್ ಕ್ವಾರ್ಟರ್ಸ್, ವನಿತಾ ಸಮಾಜ, ಶ್ರೀರಾಮ ಪಾರ್ಕ್ ಮೂಲಕ ಮಠಕ್ಕೆ ಮರಳಿತು.  ಕೃಷ್ಣಾಚಾರ್ಯ, ಜಯತೀರ್ಥಾಚಾರ್ ವಡೇರ್, ಮಠದ ವ್ಯವಸ್ಥಾಪಕ ರಾಮಗೋಪಾಲ ಕಟ್ಟಿ, ಗುರುರಾಜ್ (ರಾಜಣ್ಣ), ನಾಗರಾಜ್, ಪ್ರಕಾಶ್ ನಾಡಿಗೇರ್, ಎಂ.ಬಿ. ಬದರೀನಾಥ್, ಸುಶಿಲೇಂದ್ರಾಚಾರ್, ಭಾರತೀ ಭಜನಾ ಮಂಡಳಿ ಅಧ್ಯಕ್ಷೆ ರಾಧಾ ಮತ್ತು ಅನೇಕ ಭಕ್ತರು ಪಾಲ್ಗೊಂಡಿದ್ದರು.  ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಗುರು ಸ್ತೋತ್ರ ಪಾರಾಯಣ ಮತ್ತು ಫಲ ಪಂಚಾಮೃತ, ರಾಯರ ಪಾದಪೂಜೆ ನೆರವೇರಿತು. ನಂತರ ಅಲಂಕಾರ ಪೂಜೆ, ನೈವೇದ್ಯ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನಡೆದವು. ಸಂಜೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ, ಮಹಾ ಮಂಗಳಾರತಿ ಮಾಡಲಾಯಿತು.  ವೇದ ಪಂಡಿತ ಪುರಂದರಾಚಾರ್ಯ ಹಯಗ್ರೀವ ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಕುರಿತು ಪ್ರವಚನ ನಡೆಸಿಕೊಟ್ಟರು. ರಾಯರ ವೃಂದಾವನವನ್ನು ಪುಷ್ಪಗಳಿಂದ ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು.    ಕೆಬಿ ಬಡಾವಣೆ ಮಠ  ಕೆಬಿ ಬಡಾವಣೆ ರಾಯರ ಮಠದಲ್ಲಿ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ನಂತರ ಸುಪ್ರಭಾತ, ಫಲ ಪಂಚಾಮೃತ, ಶ್ರೀಹರಿ ವಾಯುಸ್ತುತಿ ಪಾರಾಯಣ, ಶ್ರೀ ರಾಘವೇಂದ್ರ ಸ್ತೋತ್ರ, ಅಷ್ಟೋತ್ತರ ಪಾರಾಯಣ, ಕನಕಾಭಿಷೇಕ ಮಾಡಲಾಯಿತು. ಪಂಡಿತರಿಂದ ಉಪನ್ಯಾಸ, ಮಹಾ ನೈವೇದ್ಯ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.  ಸಂಜೆ ದೀವಟಗಿ ಸೇವೆ, ಪ್ರಾಕಾರ ರಥೋತ್ಸವ, ಅಷ್ಟಾವಧಾನ, ಮಹಾ ಮಂಗಳಾರತಿ ನೆರವೇರಿದವು. ವಿದ್ವಾನ್ ಸಂಜೀವ ಜೋಶಿ ಮತ್ತು ತಂಡದವರು ಹರಿದಾಸ ವಾಣಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net