

ದಾವಣಗೆರೆ : ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಶುಕ್ರವಾರ ಸಂಜೆ ದಾವಣಗೆರೆಯಲ್ಲಿ ಪೊಲೀಸ್ ವಶದಿಂದ ಬಿಡುಗಡೆ ಗೊಳಿಸಲಾಯಿತು. ಪೊಲೀಸರು ಸಿ.ಟಿ. ರವಿ ಅವರನ್ನು ಬೆಳಗಾವಿಯಿಂದ ಬೆಂಗಳೂರಿಗೆ ಕರೆದುಕೊಂಡು ಹೊರಟಿದ್ದರು. ಅವರು ದಾವಣಗೆರೆ ಸಮೀಪಿಸುತ್ತಿದ್ದಂತೆ ನ್ಯಾಯಾಲಯದ ಬಿಡುಗಡೆ ಆದೇಶದ ಪ್ರತಿ ಕೈಸೇರಿದ್ದರಿಂದ ಇಲ್ಲಿಯೇ ಬಿಡುಗಡೆ ಪ್ರಕ್ರಿಯೆ ಕೈಗೊಳ್ಳಲಾಯಿತು. ಸಂಜೆ 7 ಗಂಟೆಗೆ ನಗರದ ಬೈಪಾಸ್ ರಸ್ತೆಯಲ್ಲಿರುವ ಸರ್ಕಿಟ್ ಹೌಸ್‌ಗೆ ಸಿ.ಟಿ. ರವಿ ಅವರನ್ನು ಕರೆ ತರಲಾಯಿತು. ಕೋರ್ಟ್ ಆದೇಶದ ಪ್ರತಿಯನ್ನು ಆಧರಿಸಿ ಅವರನ್ನು ಪೊಲೀಸ್ ವಶದಿಂದ ಬಿಡುಗಡೆ ಮಾಡಲಾಯಿತು. ಬೆಳಗಾವಿಯಿಂದ ಬಂದಿದ್ದ ತನಿಖಾಧಿಕಾರಿ ಗಂಗಾಧರ ಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರೂ ಜತೆಯಲ್ಲಿದ್ದರು. ಸಿ.ಟಿ. ಅವರು ಬರುವ ವಿಚಾರ ತಿಳಿದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಬೈಪಾಸ್ ರಸ್ತೆಯಲ್ಲಿ ಜಿಲ್ಲಾ ಪಂಚಾಯಿತಿ ಮುಂಭಾಗದಲ್ಲಿ ಪಕ್ಷದ ಧ್ವಜಗಳನ್ನು ಹಿಡಿದು ಕಾಯುತ್ತಿದ್ದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿ.ಟಿ. ರವಿ ಮತ್ತು ಇತರ ನಾಯಕರು ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ್, ರಾಜನಹಳ್ಳಿ ಶಿವಕುಮಾರ್, ಪಿ.ಸಿ. ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಸೇರಿದ್ದರು. ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದು ಭದ್ರತೆಯ ವ್ಯವಸ್ಥೆ ಮಾಡಿದರು.