

ದಾವಣಗೆರೆ : ನಗರದ ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯ ರಥೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣ ಕಳೆಗಟ್ಟಿತ್ತು. ಹೂವು, ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ನಂದಿಕೋಲು, ಚಂಡೆ ಮುಂತಾದ ಕಲಾ ತಂಡಗಳು ಉತ್ಸವಕ್ಕೆ ಇನ್ನಷ್ಟು ಕಳೆ ತಂದುಕೊಟ್ಟಿದ್ದವು. ಚಂಡೆಯ ಸದ್ದು ದೇಗುಲದ ಪರಿಸರವನ್ನು ತುಂಬಿಕೊಂಡಿತ್ತು. ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತ ಭಾವ ಅನುಭವಿಸಿದರು. ಭಕ್ತರು ‘ಬಕ್ಕೇಶ್ವರ ಮಹಾರಾಜ್ ಕೀ ಜೈ’ ಎಂದು ಘೋಷಣೆ ಕೂಗಿದರು. ಪುಷ್ಪಾಲಂಕೃತವಾಗಿದ್ದ ಪಲ್ಲಕ್ಕಿಯಲ್ಲಿ ಜಯದೇವ ಜಗದ್ಗುರುಗಳ ಭಾವಚಿತ್ರವನು ಇಡಲಾಗಿತ್ತು. ರಥವನ್ನು ಬಣ್ಣ ಬಣ್ಣದ ಹೂವುಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ಶ್ರದ್ಧಾ ಭಕ್ತಿಯಿಂದ ರಥಕ್ಕೆ ಪೂಜೆ ಸಲ್ಲಿಸಿದರು. ತೇರು ಸಾಗುವ ಮಾರ್ಗವನ್ನು ಸ್ವಚ್ಛಗೊಳಿಸಲಾಗಿತ್ತು. ರಥೋತ್ಸವವನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲೂ ಭಕ್ತರು ತುಂಬಿಕೊಂಡಿದ್ದರು. ತೇರಿನತ್ತ ಬಾಳೆಹಣ್ಣು ತೂರುವ ಮೂಲಕ ಮನದ ಅಭೀಷ್ಟೆಗಳನ್ನು ಪೂರೈಸುವಂತೆ ಪ್ರಾರ್ಥಿಸಿಕೊಂಡರು. ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಉದ್ಯಮಿ ಅಥಣಿ ವೀರಣ್ಣ ಮುಂತಾದ ಗಣ್ಯರು ಸ್ವಾಮಿಯ ದರ್ಶನ ಪಡೆದು ರಥೋತ್ಸವದ ಸಂದರ್ಭಕ್ಕೆ ಸಾಕ್ಷಿಯಾದರು. ಹೆಬ್ಬಾಳು ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಪಾಲ್ಗೊಂಡಿದರು. ರಥೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶುಕ್ರವಾರ ಮಹಾಸ್ವಾಮಿಯ ನಂದಿವಾಹನ ಓಕಳಿ ಮಹೋತ್ಸವ ರಾತ್ರಿ 7 ಗಂಟೆಯಿಂದ ನಗರದ ಮುಖ್ಯ ಬೀದಿಗಳಲ್ಲಿ ನಡೆಯುವುದು. ಭಕ್ತರು ಭಾಗವಹಿಸುವಂತೆ ಕೋರಲಾಗಿದೆ.