ರಾಣಿ ಅಬ್ಬಕ್ಕ ಸ್ವಾಭಿಮಾನ ಯುವಜನರಿಗೆ ಮಾದರಿ

dvg-rathayatre.jpg
Published on

ದಾವಣಗೆರೆ  : ರಾಣಿ ಅಬ್ಬಕ್ಕ ವಸಾಹತುಶಾಹಿ ವಿರುದ್ಧ ಹೋರಾಡಿದ ಜಗತ್ತಿನ ಮೊದಲ ಮಹಿಳೆಯಾಗಿದ್ದಾರೆ. ಆಕೆಯಲ್ಲಿದ್ದ ಸ್ವಾಭಿಮಾನ ಯುವಜನರಿಗೆ ಆದರ್ಶವಾಗಿದೆ ಎಂದು ಸಂಘ ಪರಿವಾರದ ಮುಖಂಡ, ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.  ನಗರದ ರೇಣುಕ ಮಂದಿರದಲ್ಲಿ ಶನಿವಾರ, ಭಾರತದ ಮೊದಲ ಮಹಿಳಾ ಸ್ವಾತಂತ್ರೃ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯುತ್ಸವ ಅಂಗವಾಗಿ ಎಬಿವಿಪಿಯಿಂದ ಆಯೋಜಿಸಿರುವ ರಾಣಿ ಅಬ್ಬಕ್ಕ ರಥಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ದೇಶ ಮೊದಲು ಎಂಬುದು ರಾಣಿ ಅಬ್ಬಕ್ಕ ಮಂತ್ರವಾಗಿತ್ತು. ಹಾಗಾಗಿಯೇ ಅವರು ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದರು. ಸರಳ ಸಜ್ಜನಿಕೆಯ ರೂಪವಾಗಿದ್ದ ಆಕೆ ಸಾಮಾನ್ಯರ ಪರವಾಗಿ ಕೆಲಸ ಮಾಡಿದಳು, ತನ್ನತನದಿಂದ ಬದುಕಿ ತೋರಿಸಿದಳು ಎಂದು ತಿಳಿಸಿದರು.  ಹತ್ತು ಸಾವಿರ ವರ್ಷಗಳ ಇತಿಹಾಸವಿರುವ ಭಾರತಕ್ಕೆ ಶ್ರೇಷ್ಠ ಪರಂಪರೆಯಿದೆ. ಈ ದೇಶಕ್ಕೆ ಜೀವಂತಿಕೆ, ಆಧ್ಯಾತ್ಮಿಕ ಶಕ್ತಿ ಇದೆ. ಇಲ್ಲಿನ ಧರ್ಮ, ಸಂಸ್ಕೃತಿಯನ್ನು ಕಾಪಾಡಬೇಕು. ಬಿಸಿರಕ್ತದ ಯುವಕರು ದೇಶಕ್ಕಾಗಿ ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  ನಮ್ಮ ಶಿಕ್ಷಣ ವ್ಯವಸ್ಥೆ ಬ್ರಿಟೀಷ್ ಅಧಿಕಾರಿ ಮೆಕಾಲೆ ಜಾರಿಗೆ ತಂದ ಪದ್ಧತಿಯಿಂದ ಹೊರ ಬರಬೇಕಿದೆ. ದೇಶದ ಜತೆಗೆ ನಮ್ಮನ್ನು ಬೆಸೆಯುವಂತಿರಬೇಕು. ನೂತನ ಶಿಕ್ಷಣ ನೀತಿಯಿಂದ ಆ ಬದಲಾವಣೆ ನಿರೀಕ್ಷಿಸಬಹುದು ಎಂದು ಆಶಯ ವ್ಯಕ್ತಪಡಿಸಿದರು.  ಜಿಹಾದಿ ಆಕ್ರಮಣ, ಮತಾಂತರದ ವಿರುದ್ಧ ಹೋರಾಡುವ ಮೂಲಕ ನಮ್ಮ ಸ್ವಾತಂತ್ರೃವನ್ನು ಉಳಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.  ಪದ್ಮಶ್ರೀ ಪುರಸ್ಕೃತ ಕ್ಯಾನ್ಸರ್ ವೈದ್ಯೆ ವಿಜಯಲಕ್ಷ್ಮಿ ದೇಶಮಾನೆ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸಬೇಕು. ಎಬಿವಿಪಿಯಲ್ಲಿ ಅದಕ್ಕೆ ಅಡಿಪಾಯ ಸಿಗುತ್ತದೆ ಎಂದರು.  ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ ವಿದ್ಯಾರ್ಥಿನಿ ಪ್ರಮುಖ್ ಸುಧಾ ಶೆಣೈ, ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ. ಮಾತನಾಡಿದರು. ಪ್ರದೀಪ್ ಕಾರಂತ್, ಎಸ್.ಆರ್. ಲೇಪಾಕ್ಷ, ಪಲ್ಲವಿ ಎಂ.ಕೆ. ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net