

ದಾವಣಗೆರೆ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ, ದೇಶದ ಮೊದಲ ಮಹಿಳಾ ಸ್ವಾತಂತ್ರೃ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ಅವರ ಯಶೋಗಾಥೆಯನ್ನು ಯುವ ಪೀಳಿಗೆಗೆ ಪರಿಚಯಿಸಲು ರಾಜ್ಯದಲ್ಲಿ ಎರಡು ಮಾರ್ಗಗಳಲ್ಲಿ ಸೆ. 6ರಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿ ಪ್ರಾಂತ ಶೋಧ ಸಹ ಪ್ರಮುಖ್ ಚಂದ್ರಶೇಖರ ಮರಬದ್ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯುತ್ಸವ ಪ್ರಯುಕ್ತ ಈ ಕಾರ್ಯಕ್ರಮ ರೂಪಿಸಲಾಗಿದೆ. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಗುರುಪ್ರಸಾದ್ ನೇತೃತ್ವದಲ್ಲಿ ಮೊದಲ ಮಾರ್ಗದಲ್ಲಿ ರಥಯಾತ್ರೆಯು ದಾವಣಗೆರೆಯಿಂದ ಸೆ. 6ರಂದು ಆರಂಭವಾಗಿ ಚಿತ್ರದುರ್ಗ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮಾರ್ಗವಾಗಿ ಮಂಗಳೂರು ತಲುಪಲಿದೆ ಎಂದು ತಿಳಿಸಿದರು. ಸೆ. 6ರಂದು ಬೆಳಗ್ಗೆ 10 ಗಂಟೆಗೆ ನಗರದ ರೇಣುಕ ಮಂದಿರದಲ್ಲಿ ನಡೆಯುವ ರಥಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಯಾತ್ರೆಗೆ ಚಾಲನೆ ನೀಡುವರು. ಪದ್ಮಶ್ರೀ ಪುರಸ್ಕೃತೆ ಡಾ.ವಿಜಯಲಕ್ಷ್ಮಿ ದೇಶಮಾನೆ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರವಣ್ ಬಿ. ರಾಜ್, ಮುಖಂಡರಾದ ಗಂಗಾಧರ ಹಂಜಗಿ, ಗೋಪಿ, ತನೋಜ್, ಪಲ್ಲವಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು. ಎರಡನೇ ಮಾರ್ಗದ ರಥಯಾತ್ರೆಯು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಚಾಮರಾಜನಗರ, ಕೊಡಗು ಮಾರ್ಗವಾಗಿ ಮಂಗಳೂರು ತಲುಪಲಿದೆ. ಸೆ. 16ರಂದು ಮಂಗಳೂರಿನ ಟೌನ್ ಹಾಲ್‌ನಲ್ಲಿ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಎಚ್.ಕೆ. ಪ್ರವೀಣ್, ನಗರ ಕಾರ್ಯದರ್ಶಿ ಪಲ್ಲವಿ, ಜಿಲ್ಲಾ ಸಂಚಾಲಕ ತನೂಜ್ ಸುದ್ದಿಗೋಷ್ಠಿಯಲ್ಲಿದ್ದರು.