

ದಾವಣಗೆರೆ : ಆಂಧ್ರ ಪ್ರದೇಶದ ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಅವರ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ ಆ. 2ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಸತ್ಯಸಾಯಿ ರಥಯಾತ್ರೆ ಸಮಿತಿ ಜಿಲ್ಲಾ ಸಂಯೋಜಕ ಸಾಯಿನಾಥ್ ಪ್ರಸಾದ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಥಯಾತ್ರೆಯು ಪುಟ್ಟಪರ್ತಿಯಿಂದ ಬಳ್ಳಾರಿಗೆ ಆಗಮಿಸಲಿದೆ. ಅಲ್ಲಿಂದ ಜಗಳೂರು ಮಾರ್ಗವಾಗಿ ದಾವಣಗೆರೆ ಜಿಲ್ಲೆ ಪ್ರವೇಶಿಸಲಿದೆ. ಜಗಳೂರಿನ ದೊಡ್ಡ ಮಾರಮ್ಮ ದೇವಸ್ಥಾನದ ಬಳಿ ಅದ್ದೂರಿ ಸ್ವಾಗತ ಕೋರಲಾಗುವುದು ಎಂದು ಮಾಹಿತಿ ನೀಡಿದರು. ಸತ್ಯಸಾಯಿ ಸೇವಾ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟರಮಣ ಗೋಸಾವಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಅಣಜಿ, ಮೆಳೇಕಟ್ಟೆ, ಆಲೂರುಹಟ್ಟಿ ಮಾರ್ಗವಾಗಿ ರಥಯಾತ್ರೆ ದಾವಣಗೆರೆಗೆ ಬರಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಪಿ.ಬಿ. ರಸ್ತೆಯ ಕೋದಂಡರಾಮ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭವಾಗಲಿದೆ. ಗಾಂಧಿ ವೃತ್ತ, ರೇಣುಕ ಮಂದಿರ, ಎವಿಕೆ ಕಾಲೇಜು ರಸ್ತೆ, ರಾಮ್ ಆ್ಯಂಡ್ ಕೋ ವೃತ್ತ ಮಾರ್ಗವಾಗಿ ರಥಯಾತ್ರೆ ಸಾಗಲಿದೆ ಎಂದು ವಿವರಿಸಿದರು. ಸಮಿತಿಯ ಪದಾಧಿಕಾರಿಗಳಾದ ಪಾಂಡುರಂಗರಾವ್, ಕಿರಣ ರಾಯ್ಕರ್, ಜಗನ್ನಾಥ ನಾಡಿಗೇರ್, ಶುಭಾಷಿಣಿ ನಾಗರಾಜ್, ಮಂಜುಳಾ, ಅನ್ನಪೂರ್ಣ ಸುದ್ದಿಗೋಷ್ಠಿಯಲ್ಲಿದ್ದರು.