ಅಸಹಿಷ್ಣು ಮನಸ್ಸುಗಳಿಗೆ ಕೆಲಸಗಳಿಂದ ಉತ್ತರ

dvg-rangayana_20250313234843588.jpg
Published on

ದಾವಣಗೆರೆ :  ಅಸಹಿಷ್ಣು ಮನಸ್ಸುಗಳಿಗೆ ನನ್ನ ಕೆಲಸಗಳ ಮೂಲಕ ಉತ್ತರ ನೀಡುತ್ತೇನೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದರು.  ರಂಗಾಯಣದ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ ಮತ್ತು ಕರ್ನಾಟಕ ರಂಗಭೂಮಿ ಕಲಾವಿದರ ಒಕ್ಕೂಟದವರು ನೀಡಿದ್ದ ಹೇಳಿಕೆಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತ್ಯುತ್ತರ ನೀಡಿದರು.  ರಂಗಭೂಮಿಯೊಡನೆ ತಮಗಿರುವ ಒಡನಾಟ, ಆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಿರುವ ಅಧ್ಯಯನ, ಪುಸ್ತಕ ಪ್ರಕಟಣೆ ಇನ್ನಿತರ ವಿವರಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.  ನಾನು ಒಟ್ಟು 18 ಪುಸ್ತಕಗಳನ್ನು ಬರೆದಿದ್ದು ಅವುಗಳಲ್ಲಿ 7 ಕೃತಿಗಳು ರಂಗಭೂಮಿಗೆ ಸಂಬಂಧಿಸಿದವೇ ಆಗಿವೆ. ಫೆಲೋಷಿಪ್ ಕೂಡಾ ಮಾಡಿದ್ದೇನೆ. ನಟನೆ, ನಿರ್ದೇಶನದ ಬಗ್ಗೆ ಆಳವಾಗಿ ಅರ್ಥ ಮಾಡಿಕೊಂಡಿದ್ದೇನೆ. ನಾಟಕ ಅಕಾಡೆಮಿ ಸದಸ್ಯನಾಗಿ ರಂಗಭೂಮಿಗೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು.  ದಾವಣಗೆರೆಯ ಮತ್ತು ರಾಜ್ಯದ ವಿವಿಧೆಡೆಯ ರಂಗಭೂಮಿ ಕಲಾವಿದರ ವೈಶಿಷ್ಟೃಗಳನ್ನು ಬರವಣಿಗೆಯ ಮೂಲಕ ಪರಿಚಯಿಸುವ ಹಾಗೂ ಅವರ ಸಾಧನೆಯನ್ನು ಬೆಳಕಿಗೆ ತರುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.  ರಂಗಾಯಣದ ನಿರ್ದೇಶಕನಾಗಲು ಯಾವುದೇ ಲಾಬಿ ಮಾಡಿಲ್ಲ. ನನ್ನಲ್ಲಿ ಅರ್ಹತೆ ಇದ್ದುದರಿಂದಲೇ ರಂಗ ಸಮಾಜದ ಸದಸ್ಯರು ನನ್ನ ಹೆಸರನ್ನು ಶಿಫಾರಸು ಮಾಡಿದ್ದಾರೆ. ಅದನ್ನು ಪರಿಗಣಿಸಿಯೇ ಸರ್ಕಾರ ನೇಮಕ ಮಾಡಿದೆ ಎಂದು ಸಮರ್ಥಿಸಿಕೊಂಡರು.  ಸ್ಥಳೀಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪವನ್ನು ಅಲ್ಲಗಳೆದ ಅವರು, ಈ ಹಿಂದೆ ಸ್ಥಳೀಯರಿಗೆ ಹಲವು ಅವಕಾಶಗಳನ್ನು ನೀಡಲಾಗಿದೆ. ಈಗ ನಡೆಯಲಿರುವುದು ರಾಷ್ಟ್ರೀಯ ವೃತ್ತಿ ರಂಗೋತ್ಸವ ಆಗಿರುವುದರಿಂದ ಅನ್ಯ ರಾಜ್ಯಗಳ ನಾಟಕಗಳನ್ನೂ ನೋಡುವ ಅವಕಾಶ ಸ್ಥಳೀಯರಿಗೆ ಸಿಗಲಿದೆ ಎಂದು ಹೇಳಿದರು.  ಮಾ. 15 ರಿಂದ 17 ರ ವರೆಗೆ ನಗರದ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ವೃತ್ತಿ ರಂಗೋತ್ಸವವು ರಂಗಾಸಕ್ತರಿಗೆ ವಿಶಿಷ್ಟ ಅನುಭವ ನೀಡಲಿದೆ. ಕನ್ನಡದ ನಾಟಕಗಳ ಜತೆಗೆ ತೆಲುಗು ಮತ್ತು ತಮಿಳು ನಾಟಕಗಳ ಪರಿಚಯವೂ ಸ್ಥಳೀಯರಿಗೆ ಆಗಲಿದೆ ಎಂದು ತಿಳಿಸಿದರು.  ಮೂರು ದಿನಗಳ ಈ ಹಬ್ಬದಲ್ಲಿ ಕಾರ್ಯಕ್ರಮ ವೈವಿಧ್ಯ ಇರಲಿದ್ದು ಸಾರ್ವಜನಿಕರು ಈ ರಂಗೋತ್ಸವದಲ್ಲಿ ಭಾಗಿಯಾಗಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.  ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ, ರಂಗಕರ್ಮಿಗಳಾದ ಎಸ್.ಎಸ್. ಸಿದ್ಧರಾಜು, ಎನ್.ಟಿ. ಮಂಜುನಾಥ್, ಗಾಯಕಿ ಹಾಗೂ ನಿರೂಪಕಿ ಡಾ. ಶೃತಿ ರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net