

ದಾವಣಗೆರೆ : ನಗರದ ಶಿವಯೋಗಿ ಮಂದಿರದಲ್ಲಿ ನ.7ರಂದು ರಂಗ ಸಂಗೀತ ಹಾಗೂ ವೃತ್ತಿ ರಂಗ ಗೀತೆಗಳ ಕಲಿಕಾ ಕಾರ್ಯಾಗಾರದ ಸಮಾರೋಪ ಮತ್ತು ಅಭಿನಯ ಸಂಗೀತ ಪ್ರದರ್ಶನ ಆಯೋಜಿಸಲಾಗಿದೆ. ವೃತ್ತಿ ರಂಗಭೂಮಿ ರಂಗಾಯಣ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ತರಬೇತಿ ಪಡೆದ 18 ಕಲಾವಿದರು ಹಾಡು, ನಟನೆಯ ರಂಗ ರೂಪಕ ಪ್ರಸ್ತುತಪಡಿಸುವರು ಎಂದು ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ್ ಕಡಕೋಳ,ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಒಂದು ಕಾಲದಲ್ಲಿ ನಾಟಕ ಕಂಪನಿಗಳು ರಂಗ ಸಂಗೀತದ ಗರಡಿ ಮನೆಗಳಂತಿ ದ್ದವು. ಅಂದಿನ ಸದಭಿರುಚಿಯ ರಂಗ ಸಂಸ್ಕೃತಿಯನ್ನು ಮರು ರೂಪಿಸುವ ನಿಟ್ಟಿನಲ್ಲಿ ಹವ್ಯಾಸಿ ಕಲಾವಿದರಿಗೆ ‘ರಂಗ ಸಂಗೀತ ತರಬೇತಿ’ದಿಕ್ಸೂಚಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಗುರುವಾರ ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣದಾಸ್ ಸಮಾರೋಪ ನುಡಿಗಳನ್ನಾಡುವರು. ಹಿರಿಯ ರಂಗಕರ್ಮಿ ಬಾ.ಮ. ಬಸವರಾಜಯ್ಯ ಪಾಲ್ಗೊಳ್ಳುವರು. ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಸಾವಿತ್ರಿ ರಿತ್ತಿ, ಹಿರಿಯ ರಂಗ ನಿರ್ದೇಶಕ ಡಾ.ಪ್ರಕಾಶ್ ಗರುಡ, ಕಾರ್ಯಾಗಾರದ ನಿರ್ದೇಶಕ ರಾಘವ ಕಮ್ಮಾರ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು. ವೃತ್ತಿ ರಂಂಗಭೂಮಿ ರಂಗಾಯಣ ವಿಶೇಷಾಧಿಕಾರಿ ರವಿಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು.