ದಾವಣಗೆರೆಯಿಂದ ತೆರಳಿತ್ತು ಕರಸೇವಕರ ತಂಡ

ram.jpg
Published on

ದಾವಣಗೆರೆ : ಮೂರು ದಶಕಗಳ ಹಿಂದಿನ ಮಾತು. ಎಲ್ಲರ ಗಮನ ಅಯೋಧ್ಯೆಯ ಕಡೆಗಿತ್ತು. ದೇಶದ ವಿವಿಧೆಡೆಯಿಂದ ಕರಸೇವಕರು ರಾಮನ ಊರಿನತ್ತ ಪ್ರಯಾಣ ಬೆಳೆಸಿದ್ದರು. ಮಧ್ಯ ಕರ್ನಾಟಕದ ದಾವಣಗೆರೆಯಿಂದಲೂ ಒಂದು ತಂಡ ಹೊರಟಿತು. ಹೇಗಾದರೂ ಮಾಡಿ ಆ ಪುಣ್ಯ ಭೂಮಿಯನ್ನು ತಲುಪಬೇಕು ಎಂಬುದಷ್ಟೇ ಅವರ ಗುರಿಯಾಗಿತ್ತು. ಮಂದಿರವಲ್ಲೇ ಕಟ್ಟುವೆವು ಎಂಬುದು ಅವರ ಸಂಕಲ್ಪವಾಗಿತ್ತು.
 ದಾವಣಗೆರೆಯ ಎ.ಆರ್. ರೇವಣಸಿದ್ದಪ್ಪ (ಪುಟ್ಟಪ್ಪ) ಸತ್ಯನಾರಾಯಣ ಮೂರ್ತಿ, ಮಹಾಬಲೇಶ್ವರ ಭಟ್, ರಮೇಶ್, ನಾಗೇಶ ಗುಪ್ತಾ, ಹುಲಿಕಟ್ಟೆ ನಾರಪ್ಪ, ಶಿವಯೋಗಿಸ್ವಾಮಿ ಸೇರಿ 25 ಜನ ರಾಮ ಭಕ್ತರು 1992ರ ಡಿಸೆಂಬರ್‌ನಲ್ಲಿ ಅಯೋಧ್ಯೆಯತ್ತ ಪಯಣ ಆರಂಭಿಸಿದರು. 10-15 ಜನರ ಒಂದು ತಂಡ ಮುಂದೆ ಹೋಗಿತ್ತು. ಉಳಿದವರು ಮತ್ತೊಂದು ರೈಲಿನಲ್ಲಿ ಹೊರಟರು.
 ಆ ರೈಲಿನ ಪ್ರಯಾಣ ಝಾನ್ಸಿ ನಿಲ್ದಾಣದಲ್ಲಿ ಕೊನೆಗೊಂಡಿತು. ಅಲ್ಲಿಂದ ಮತ್ತೊಂದು ರೈಲಿನಲ್ಲಿ ಲಕ್ನೋ ತಲುಪಿದರು. ಅಲ್ಲಿಂದ ಮುಂದೆ ರೈಲು ಇರಲಿಲ್ಲ. ಫೈಜಾಬಾದ್ ವರೆಗೆ ಬಸ್‌ನಲ್ಲಿ ತೆರಳಿದರು.
 ಫೈಜಾಬಾದ್‌ನಿಂದ ಅಯೋಧ್ಯಾ ವರೆಗಿನ 20 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದರು. ಮಾರ್ಗ ಮಧ್ಯೆ ಭಕ್ತರು ಊಟದ ವ್ಯವಸ್ಥೆ ಮಾಡಿದ್ದರು. ಸ್ಥಳೀಯರು ಬಹಳ ಸಹಕಾರ ನೀಡಿದರು ಎಂದು ಎ.ಆರ್. ರೇವಣಸಿದ್ದಪ್ಪ ನೆನಪು ಮಾಡಿಕೊಂಡರು.
 ಅಂತೂ ಡಿ. 5ರ ಬೆಳಗ್ಗೆ ಅವರು ರಾಮನ ಊರು ತಲುಪಿದರು. ಅಲ್ಲಿನ ಕರಸೇವಕರ ಪುರದಲ್ಲಿ ವಸತಿ ವ್ಯವಸ್ಥೆಯಾಗಿತ್ತು. ರಾಜ್ಯವಾರು ಟೆಂಟ್‌ಗಳನ್ನು ಹಾಕಿದ್ದರು. ಅಂದು ಸಂಜೆ ಪಥಸಂಚಲನ ಮಾಡಿದೆವು. 6 ರಂದು ಬೆಳಗ್ಗೆ ಸರಯು ನದಿಯಲ್ಲಿ ಸ್ನಾನ ಮಾಡಿ ಹನುಮಾನ್ ಮಂದಿರದಲ್ಲಿ ಪೂಜೆ ಸಲ್ಲಿಸಿ ಬಾಬರಿ ಕಟ್ಟಡದ ಬಳಿ ಬಂದೆವು ಎಂದು ಅವರು ತಿಳಿಸಿದರು.
 ...
 (ಬಾಕ್ಸ್)
 
 ಇಟ್ಟಿಗೆಯೊಂದಿಗೆ ಮರಳಿದರು
 ನಾವೆಲ್ಲ ನಮ್ಮ ನಾಯಕರ ಭಾಷಣವನ್ನು ಕೇಳುತ್ತಿದ್ದೆವು, ಅದೇ ವೇಳೆ ಕೆಲವರು ಬಾಬರಿ ಕಟ್ಟಡದ ಮೇಲೆ ಹತ್ತಿ ಬಾವುಟ ತೋರಿಸಿದರು. ಸ್ವಲ್ಪ ಹೊತ್ತು ಅಲ್ಲಿ ಏನಾಗುತ್ತಿದೆ ಎಂಬುದು ಅರ್ಥವಾಗಲಿಲ್ಲ. ಅಷ್ಟರಲ್ಲಿ ಹುಲಿಕಟ್ಟೆ ನಾರಪ್ಪ ಕಟ್ಟಡದ ಅವಶೇಷಗಳನ್ನು ಕೈಯಲ್ಲಿ ಹಿಡಿದುಕೊಂಡು ನಮ್ಮ ಬಳಿ ಬಂದು ಅಲ್ಲಿನ ಘಟನೆಯನ್ನು ವಿವರಿಸಿದ್ದಾಗಿ ರೇವಣಸಿದ್ದಪ್ಪ ತಿಳಿಸಿದರು.
 ‘ಜೈ ಶ್ರೀರಾಂ, ಜೈ ಜೈ ಶ್ರೀರಾಂ’ ಘೋಷಣೆಗಳು ಇಡೀ ಅಯೋಧ್ಯೆಗೆ ಕೇಳಿಸುತ್ತಿದ್ದವು. ನಾವು ಆ ಕ್ಷಣಗಳಿಗೆ ಸಾಕ್ಷಿಯಾದೆವು. ಜತೆಯಲ್ಲಿ ತೆಗೆದುಕೊಂಡು ಹೋಗಿದ್ದ ಖಡ್ಗ, ಗುದ್ದಲಿ, ಹಾರೆಕೋಲುಗಳೊಂದಿಗೆ ಆ ಕಟ್ಟಡದ ಬಳಿ ಹೋಗಿ ಇಟ್ಟಿಗೆಯೊಂದನ್ನು ತಂದೆವು ಎಂದು ಹೇಳಿದರು.
 ಮರುದಿನ ಬೆಳಗ್ಗೆ ದೇವರ ದರ್ಶನ ಪಡೆದು ರೈಲು ನಿಲ್ದಾಣಕ್ಕೆ ಬಂದೆವು.
 ...
 
 (ಕೋಟ್)
 1992 ರಲ್ಲಿ ಹೋದಾಗ ಎರಡು ಬಾರಿ ರಾಮನ ಮೂರ್ತಿಯ ದರ್ಶನ ಪಡೆದಿದ್ದೆವು. ಈಗ ಹೊಸದಾಗಿ ಮಂದಿರ ನಿರ್ಮಾಣವಾಗಿದೆ. ಮುಂದೊಂದು ದಿನ ಮತ್ತೊಮ್ಮೆ ಅಯೋಧ್ಯೆಗೆ ತೆರಳಿ 3ನೇ ಬಾರಿ ದರ್ಶನ ಪಡೆಯುವ ಉದ್ದೇಶವಿದೆ. ಅಷ್ಟು ವರ್ಷಗಳ ಹೋರಾಟ ಈಗ ಫಲ ನೀಡಿದೆ. ಮಂದಿರದ ಉದ್ಘಾಟನೆ ಆಗುತ್ತಿರುವುದು ನಮಗೆಲ್ಲ ಬಹಳ ಸಂತೋಷ ತಂದಿದೆ.
  ಎ.ಆರ್. ರೇವಣಸಿದ್ದಪ್ಪ, ಅಯೋಧ್ಯೆಗೆ ತೆರಳಿದ್ದ ಕರಸೇವಕ
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net