ಜಿಎಂಯುನಿಂದ ವೈಭವದ ಹರ್ ಘರ್ ತಿರಂಗ ಜಾಥಾ

dvg-rally_20250814234117300.jpg
Published on

ದಾವಣಗೆರೆ  : ನಗರದ ಜಿ.ಎಂ. ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ಹರ್ ಘರ್ ತಿರಂಗ ಕಾಲ್ನಡಿಗೆ ಜಾಥಾ ವೈಭವದಿಂದ ನಡೆಯಿತು.  ವಿದ್ಯಾರ್ಥಿಗಳು, ಅಧ್ಯಾಪಕರು ಮನೆ ಮನೆಗೆ ತೆರಳಿ ರಾಷ್ಟ್ರಧ್ವಜ ನೀಡಿ ಧ್ವಜಾರೋಹಣಕ್ಕೆ ನಾಗರಿಕರಿಗೆ ಪ್ರೇರೇಪಿಸುವ ಜತೆಗೆ ದೇಶಪ್ರೇಮವನ್ನು ಬಿತ್ತಿದರು.  ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ಹಮ್ಮಿಕೊಳ್ಳಲಾಗಿದ್ದ ಈ ಜಾಥಾಗೆ ಜಿಎಂಯು ಕ್ಯಾಂಪಸ್‌ನಲ್ಲಿ ವಿವಿ ಆಡಳಿತಾಧಿಕಾರಿ ಡಾ. ವೈ.ಯು. ಸುಭಾಷ್ ಚಾಲನೆ ನೀಡಿ ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಜಿಎಂಯು ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಸುನೀಲ್ ಕುಮಾರ್ ಬಿ.ಎಸ್, ಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ್ ಪಾಂಡೆ ಎಂ.ಬಿ ಸೇರಿ ಜಿಎಂ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರಾಚಾರ್ಯರು, ಡೀನ್‌ಗಳು, ನಿರ್ದೇಶಕರು, ಮುಖ್ಯಸ್ಥರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗದವರು ಪಾಲ್ಗೊಂಡಿದ್ದರು.  ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಮಾರ್ಗದರ್ಶನದ ಹಾಗೂ ಮಾರ್ಕೆಟಿಂಗ್ ಮತ್ತು ಪ್ರಮೋಷನ್ ಡೀನ್ ಡಾ. ವೀರಗಂಗಾಧರ ಸ್ವಾಮಿ ಟಿ.ಎಂ ನೇತೃತ್ವದ ಜಾಥಾದಲ್ಲಿ ಭಾಗವಹಿಸಿದ್ದ ಎನ್‌ಎಸ್‌ಎಸ್, ಎನ್‌ಸಿಸಿ ವಿದ್ಯಾರ್ಥಿಗಳ ಜತೆಗೆ ಜಿಎಂಯು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಹರ್ ಘರ್ ತಿರಂಗ ಮತ್ತು ವಂದೇ ಮಾತರಂ ಎಂಬ ಜಯ ಘೋಷಗಳನ್ನು ಹಾಕಿದರು.  ರಾಮ್ ಆ್ಯಂಡ್ ಕೋ ವೃತ್ತದಿಂದ ಆರಂಭವಾದ ಜಾಥಾ ಅರುಣಾ ಚಿತ್ರಮಂದಿರ ರಸ್ತೆ, ಪಿ.ಬಿ. ರಸ್ತೆ ಮಾರ್ಗವಾಗಿ ರೇಣುಕ ಮಂದಿರ ರಸ್ತೆ, ಎವಿಕೆ ಕಾಲೇಜು ರಸ್ತೆ, ವಿಜಯ ಹೋಟೆಲ್ ರಸ್ತೆ, ಸಿಜಿ ಆಸ್ಪತ್ರೆ ರಸ್ತೆ, ಗುಂಡಿ ಮಹದೇವಪ್ಪ ವೃತ್ತ, ನಿಜಲಿಂಗಪ್ಪ ಬಡಾವಣೆಯಲ್ಲಿರುವ ಅಮರ್ ಜವಾನ್ ಉದ್ಯಾನವನದಲ್ಲಿ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net