ಆಟೋ ಚಾಲಕರ ಕನ್ನಡಾಭಿಮಾನಕ್ಕೆ ಮೆಚ್ಚುಗೆ

dvg-rally.jpg
Published on

ದಾವಣಗೆರೆ : ಆಟೋ ಚಾಲಕರಿಂದ ಕನ್ನಡ ಭಾಷೆ ಉಳಿಯುತ್ತಿದೆ ಹಾಗೂ ಬೆಳೆಯುತ್ತಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಹೇಳಿದರು.  ಶಾಲಾ ಆಟೋ ಮತ್ತು ವ್ಯಾನ್ ಚಾಲಕರ ಸಂಘದಿಂದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಆಟೋ ಮತ್ತು ವ್ಯಾನ್ ರ‌್ಯಾಲಿಗೆ ಚಾಲನೆ ಸಮಾರಂಭದಲ್ಲಿ ಮಾತನಾಡಿದರು.  ವಾಹನದ ಮೇಲೆ ಕನ್ನಡದಲ್ಲಿ ಹೆಸರು ಹಾಗೂ ಸಾಹಿತ್ಯಿಕ ಸಾಲುಗಳನ್ನು ಬರೆದು ಭಾಷೆಯ ಸೊಬಗನ್ನು ಹೆಚ್ಚಿಸುತ್ತಿದ್ದೀರಿ. ಆಟೋ ಹಾಗೂ ವ್ಯಾನ್ ಚಾಲಕರು ಸಾಮಾಜಿಕ ಕಳಕಳಿ ಹೊಂದಿದ್ದಾರೆ ಎಂದು ಶ್ಲಾಘಿಸಿದರು.  ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೇ ನಿತ್ಯೋತ್ಸವ ಆಗಬೇಕು ಎಂದು ಹೇಳಿದರು.  ಪ್ರಸಕ್ತ ದಿನಮಾನಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವ್ಯಾನ್ ಮತ್ತು ಆಟೋ ಚಾಲಕರು ಕನ್ನಡಕ್ಕಾಗಿ ಒಂದು ಹೆಜ್ಜೆ ಮುಂದೆ ಬಂದು ಹೋರಾಟ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಸಂಘದ ಅಧ್ಯಕ್ಷ ವಿ. ಮಂಜುನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಮಂಜುನಾಥ, ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ಶೈಲಜಾ, ಡಾ. ದಿವ್ಯಾ, ಗಂಗಾಧರ, ರುದ್ರಸ್ವಾಮಿ, ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net