ದಾವಣಗೆರೆ ಮಹಾನಗರ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವ

corpo.jpg
Published on

ದಾವಣಗೆರೆ : ನಗರದ ಮಹಾನಗರ ಪಾಲಿಕೆ ಆವರಣದ ರಾಧಮ್ಮ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ನ.25 ರಿಂದ 27 ರವರೆಗೆ ಮಹಾಪೌರ ಬಿ.ಎಚ್. ವಿನಾಯಕ ಪೈಲ್ವಾನ್ ಅಧ್ಯಕ್ಷತೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
 ಮಹಾನಗರ ಪಾಲಿಕೆ, ಕನ್ನಡಪರ ಸಂಘ-ಸಂಸ್ಥೆಗಳು ಮತ್ತು ಪತ್ರಕರ್ತರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಾಲಿಕೆ ಸದಸ್ಯ ಎ. ನಾಗರಾಜ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಶನಿವಾರ ಬೆಳಗ್ಗೆ 9.30 ಕ್ಕೆ ಪಾಲಿಕೆ ಆವರಣದಲ್ಲಿ ಪಾಲಿಕೆ ಮಹಾಪೌರ ಬಿ.ಎಚ್. ವಿನಾಯಕ ಪೈಲ್ವಾನ್ ಕನ್ನಡ ಧ್ವಜಾರೋಹಣ ನೆರವೇರಿಸುವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಶ್ರೀ ಭುವನೇಶ್ವರಿ ಮೆರವಣಿಗೆ ಉದ್ಘಾಟಿಸುವರು. ಸುಮಾರು 15 ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದರು.
 ಸಂಜೆ 5.30ಕ್ಕೆ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸುವರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವರು. ಹರಿಹರದ ನಿವೃತ್ತ ಪ್ರಾಧ್ಯಾಪಕ ಡಾ. ಭಿಕ್ಷಾವರ್ತಿಮಠ ವಿಶೇಷ ಉಪನ್ಯಾಸ ನೀಡುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪ ಮಹಾಪೌರರಾದ ಯಶೋದಾ ಯಗ್ಗಪ್ಪ ಇತರರು ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳ 42 ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
 ನ.26ರಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಂಸದ ಜಿ.ಎಂ. ಸಿದ್ದೇಶ್ವರ್ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಕೆ.ಎಸ್. ನವೀನ್, ಜಿಪಂ ಸಿಇಒ ಸುರೇಶ್ ಇಟ್ನಾಳ್ ಅತಿಥಿಗಳಾಗಿ ಭಾಗವಹಿಸುವರು. ಹೊನ್ನಾಳಿಯ ವಿಜಯ ಸೊಲ್ಲಾಪುರ ವಿಶೇಷ ಉಪನ್ಯಾಸ ನೀಡುವರು.
 ನ.27 ರಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸುವರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಾಹಿತಿ ಡಾ.ರಂಜಾನ್ ದರ್ಗಾ ಹಾಗೂ ಧರ್ಮಗುರು ಜೈನಿ ಉಸ್ತಾದ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
 ಇದೇ ವೇಳೆ ಪಾಲಿಕೆಯ ಸದಸ್ಯರಿಂದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಪೌರ ಸನ್ಮಾನ ಮಾಡಲಾಗುವುದು. ಪಾಲಿಕೆ ಸದಸ್ಯ ಅಂತಾರಾಷ್ಟ್ರೀಯ ಕ್ರೀಡಾಪಟು ಜೆ.ಎನ್. ಶ್ರೀನಿವಾಸ್ ಹಾಗೂ ಪಾಲಿಕೆ ನಿವೃತ್ತ ಆಯುಕ್ತ ಬಿ.ಎಚ್.ನಾರಾಯಣಪ್ಪ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
 ಮಹಾಪೌರ ಬಿ.ಎಚ್. ವಿನಾಯಕ ಪೈಲ್ವಾನ್, ಸದಸ್ಯರಾದ ಅಬ್ದುಲ್ ಲತೀಫ್, ಕೆ. ಚಮನ್‌ಸಾಬ್, ಜಾಕೀರ್ ಅಲಿ, ಸೋಗಿ ಶಾಂತ್‌ಕುಮಾರ್, ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್, ಪತ್ರಕರ್ತ ಕೆ. ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net