ರಾಜ್ಯೋತ್ಸವ ಆಗಲಿ ನಂಬರ್ 1 ಕಾರ್ಯಕ್ರಮ

mba.jpg
Published on

ದಾವಣಗೆರೆ : ಕನ್ನಡ ರಾಜ್ಯೋತ್ಸವ ನವೆಂಬರ್ 1ಕ್ಕೆ ಸೀಮಿತವಾಗದೇ ನಂಬರ್ 1 ಕಾರ್ಯಕ್ರಮವನ್ನಾಗಿ ಆಚರಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಭೀಮಾಶಂಕರ ಬಿ. ಜೋಷಿ ಹೇಳಿದರು.
 ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಕಾಲೇಜಿನಲ್ಲಿ ಶುಕ್ರವಾರ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಕನ್ನಡವೇ ವ್ಯವಹಾರ ಭಾಷೆಯಾಗಿರಬೇಕು. ಕನ್ನಡ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಹೇಳುತ್ತಾರೆ. ಕನ್ನಡವನ್ನು ಉಳಿಸಿ ಬೆಳೆಸಬೇಕು. ತಾಯಿಯೇ ಮೊದಲ ಗುರು, ಕನ್ನಡವೇ ಮೊದಲ ಕಲಿಕಾ ಭಾಷೆ ಎಂದು ತಿಳಿಸಿದರು. ಕರ್ನಾಟಕದ ಗತ ವೈಭವ, ಏಕೀಕರಣದ ಚಳವಳಿ, ಕರ್ನಾಟಕ ರಾಜ್ಯ ಎಂದು ನಾಮಕರಣವಾದ ಬಗ್ಗೆ ಮಾಹಿತಿ ನೀಡಿದರು.
 ಬಿಐಇಟಿ ಕಾಲೇಜಿನ ಎಂ.ಬಿ.ಎ ವಿಭಾಗದ ಮುಖ್ಯಸ್ಥ ಡಾ. ಸುಜಿತ್ ಕುಮಾರ್ ಮಾತನಾಡಿ, ಕನ್ನಡಿಗರು ಉದಾರಿಗಳು. ಸಹಾಯ ಮಾಡುವ ಮನೋಭಾವದವರು. ಎಲ್ಲ ಭಾಷೆಯನ್ನೂ ಕಲಿಯಬೇಕು, ಆದರೆ ಕನ್ನಡವನ್ನು ಮರೆಯಬಾರದು. ಮಾತೃ ಭಾಷೆಯನ್ನು ನಮ್ಮ ಕಲಿಕೆಯಲ್ಲಿ ಅಳವಡಿಸಿಕೊಂಡು ಕನ್ನಡವನ್ನು ಉಳಿಸಿ, ಬೆಳೆಸಬೇಕು ಎಂದು ತಿಳಿಸಿದರು.
 ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ ಮಾತನಾಡಿ, ಈಗಿನ ಕಾಲದ ಮಹಿಳೆಯರಲ್ಲಿ ಹೆಚ್ಚು ಆತ್ಮವಿಶ್ವಾಸವಿದೆ. ಮುಂಬರುವ ದಿನಗಳಲ್ಲಿ ನಾರಿಯರೇ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಶ್ರೀಮಂತರ ಪಟ್ಟಿಯಲ್ಲೂ ಅವರನ್ನು ನೋಡಬಹುದು ಎಂದು ಅಭಿಪ್ರಾಯಪಟ್ಟರು.
 ವಿದ್ಯಾರ್ಥಿ ಎಂ.ಕೆ. ಆದಿತ್ಯ ಮಾತನಾಡಿದರು. ಸಂಜನಾ ನಿಕ್ಕಮ್ ಯಕ್ಷಗಾನ ನೃತ್ಯ ಪ್ರದರ್ಶಿಸಿದರು. ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ, ಅನುವಾದ, ಕನ್ನಡ ಭಾಷಣ, ಪುಸ್ತಕ ವಿಮರ್ಶೆ, ವಾಗ್ವಾದ ಮತ್ತು ಸಂಗೀತ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
 ಎಸ್. ರಮ್ಯಾ ಸ್ವಾಗತಿಸಿದರು, ವರ್ಷಾ ವಂದಿಸಿದರು. ವೈಷ್ಣವಿ ಮತ್ತು ಪವನ್ ನಿರೂಪಿಸಿದರು. ಸಂಜನಾ, ಅರ್ಚನಾ, ರಕ್ಷಿತಾ, ಗೌರಿಶಂಕರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net