ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕು

male_20240607233601520.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದೆ. ಎಲ್ಲ ಕಡೆ ವ್ಯಾಪಕ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ ವಿತರಣೆಯಾಗುತ್ತಿದ್ದು ಬಿತ್ತನೆ ಕಾರ್ಯ ವೇಗ ಪಡೆಯುತ್ತಿದೆ.
 ಜಿಲ್ಲೆಯಲ್ಲಿ ಸರಾಸರಿ 11.6 ಮಿ.ಮೀ. ಮಳೆಯಾಗಿದೆ. ಜಗಳೂರು ತಾಲೂಕಿನಲ್ಲಿ ಅತಿ ಹೆಚ್ಚು 21.7 ಮಿ.ಮೀ, ಹೊನ್ನಾಳಿ 21 ಮಿ.ಮೀ, ಚನ್ನಗಿರಿ 10.7 ಮಿ.ಮೀ, ನ್ಯಾಮತಿ 5.4 ಮಿ.ಮೀ, ಹರಿಹರ 4.1 ಮಿ.ಮೀ, ದಾವಣಗೆರೆ ತಾಲೂಕಿನಲ್ಲಿ 4 ಮಿ.ಮೀ. ಮಳೆಯಾಗಿದೆ.
 ಜಗಳೂರು ತಾಲೂಕಿನಲ್ಲಿ 50 ಹೆಕ್ಟೇರ್ ಬಾಳೆ ಬೆಳೆ ಹಾಗೂ 2 ಮನೆಗಳಿಗೆ ಹಾನಿಯಾಗಿದೆ. ಹೊನ್ನಾಳಿ ತಾಲೂಕಿನಲ್ಲಿ 1 ಮನೆ ಜಖಂ ಆಗಿದೆ. ಗುರುವಾರ ರಾತ್ರಿ ಮಳೆಯಾಗಿದ್ದು ಶುಕ್ರವಾರ ಮಧ್ಯಾಹ್ನ ಚುರುಕಾಯಿತು. ಮಳೆಯ ರಭಸಕ್ಕೆ ರಸ್ತೆಗಳ ಮೇಲೆ ನೀರು ಹರಿಯಿತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು.
 ಮುಂಗಾರು ಮಳೆ ಶುರುವಾಗಿದ್ದು ಉತ್ತಮ ಮಳೆಯಾಗುತ್ತಿದೆ. ಇದೇ ರೀತಿ ಮುಂದುವರಿದರೆ ಬಿತ್ತನೆಗೆ ಅನುಕೂಲವಾಗುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ವಿತರಣೆಯ ಪ್ರಮಾಣ ಕ್ರಮೇಣ ಜಾಸ್ತಿಯಾಗುತ್ತಿದೆ. ತೊಗರಿ ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ಮೂರ್ತಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net