ಮಳೆ, ಗಾಳಿಯಿಂದ ವಿದ್ಯುತ್ ಕಂಬಗಳಿಗೆ ಹಾನಿ

IMG_20240418_165853.jpg
Published on

ದಾವಣಗೆರೆ : ಜಿಲ್ಲೆಯ ವಿವಿಧೆಡೆ ಗಾಳಿ, ಮಳೆಯಿಂದ ಹತ್ತಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಬೆಸ್ಕಾಂನ ದಾವಣಗೆರೆ ವಿಭಾಗ ಒಂದರಲ್ಲೆ 22 ವಿದ್ಯುತ್ ಕಂಬಗಳು ಬಿದ್ದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 ಸಂಜೆ ಗುಡುಗು ಸಹಿತ ಸಾಧಾರಣ ಮಳೆಯಾಯಿತು. ಗಾಳಿಯ ಹೊಡೆತಕ್ಕೆ ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿ ಮರವೊಂದು ಉರುಳಿ ಬಿದ್ದು 3 ವಿದ್ಯುತ್ ಕಂಬಗಳು ನೆಲಕ್ಕುರುಳಿದವು.
 ಒಂದು ಕಂಬದ ಅಡಿಗೆ ಸಿಲುಕಿ 3 ದ್ವಿಚಕ್ರ ವಾಹನಗಳು ಜಖಂಗೊಂಡವು. ವಿದ್ಯುತ್ ವೈರ್‌ಗಳು ರಸ್ತೆ ಮೇಲೆ ಹರಡಿಕೊಂಡಿದ್ದವು. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸರಿಪಡಿಸಿದರು. ಇದರಿಂದಾಗಿ ಕೆಲ ಹೊತ್ತು ಆ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಮಳೆಯಿಂದಾಗಿ ವಾತಾವರಣ ತಂಪಾಗಿತ್ತು.
 ದೊಡ್ಡ ಮಳೆಯೇನೂ ಆಗಿಲ್ಲ, ರೈತರಿಗೆ ಒಂದಿಷ್ಟು ಸಮಾಧಾನ ತರಬಹುದು. ಅಡಕೆ ಬೆಳೆಗೆ ಮಳೆಯ ಅಗತ್ಯ ಬಹಳ ಇತ್ತು, ಈ ಮಳೆಯಿಂದ ಸ್ವಲ್ಪವಾದರೂ ಅನುಕೂಲವಾಗುತ್ತದೆ. ಮುಂಗಾರು ಕೃಷಿಯ ಭೂಮಿ ಸಿದ್ಧತೆಗೆ ಪೂರಕ ಆಗಬಹುದು. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ 2 ರಿಂದ 3 ಮಿ.ಮೀ.ನಷ್ಟು ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಶ್ರೀನಿವಾಸ ಚಿಂತಾಲ್ ಪ್ರತಿಕ್ರಿಯೆ ನೀಡಿದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net