

ದಾವಣಗೆರೆ : ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದ ಚನ್ನಗಿರಿ ತಾಲೂಕು ನಲ್ಲೂರಿನಿಂದ ಹಿರೇಮಳಲಿಗೆ ಹೋಗುವ ರಸ್ತೆ ಸಂಪರ್ಕ ಕಡಿತವಾಗಿದೆ. ಬುಳಸಾಗರ ರಸ್ತೆ, ಚಿರಡೋಣಿ ಗ್ರಾಮದ ರಸ್ತೆಗಳು ಜಲಾವೃತಗೊಂಡಿವೆ. ಬುಳಸಾಗರ ಗ್ರಾಮದ ಐತಿಹಾಸಿಕ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದ ಅಂಗಳದಲ್ಲಿ ನೀರು ನಿಂತು ಭಕ್ತರು ತೆರಳುವುದು ಕಷ್ಟವಾಗಿದೆ. ಕೊರಟಿಕೆರೆ, ಮಾವಿನಹೊಳೆ ಕೆರೆಗಳಿಗೆ ಕೋಡಿ ಬಿದ್ದಿದೆ. ಹಿರೇಮಳಲಿ ವಡ್ಡಿನ ಕೆರೆ ಏರಿ ಒಡೆದು ನೀರು ತೋಟಕ್ಕೆ ಹರಿದಿದೆ. ತಾಲೂಕಿನಲ್ಲಿ 30 ಎಕರೆ ಅಡಕೆ ತೋಟಗಳು ಜಲಾವೃತವಾಗಿವೆ. ಕತ್ತಲಗೆರೆ, ಕಾರಿಗನೂರಿನಲ್ಲಿ 15 ಎಕರೆಗೂ ಹೆಚ್ಚು ಭತ್ತದ ಬೆಳೆಯಲ್ಲಿ ನೀರು ನಿಂತಿದೆ. ಬೈರನಹಳ್ಳಿ, ದೇವರಹಳ್ಳಿ ಹಾಗೂ ಮಾವಿನಹೊಳೆ ಗ್ರಾಮದ ಮನೆಗಳಿಗೆ ನೀರು ನುಗ್ಗಿತ್ತು. ಅಲ್ಲಿನ ನಿವಾಸಿಗಳು ತಕ್ಷಣ ಹೊರಬಂದಿದ್ದರಿಂದ ಅಪಾಯವಾಗಿಲ್ಲ. ತಾಲೂಕಿನಲ್ಲಿ 16 ಮನೆಗಳು ಭಾಗಶಃ ಬಿದ್ದಿವೆ.