

ದಾವಣಗೆರೆ : ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆ ಅವಾಂತರ ಸೃಷ್ಟಿಸಿದೆ. ಸರಾಸರಿ 32.90 ಮಿ.ಮೀ. ಮಳೆಯಾಗಿದ್ದು 6 ಲಕ್ಷ ರೂ. ನಷ್ಟ ಸಂಭವಿಸಿದೆ. ಮಳೆಯ ಆರ್ಭಟಕ್ಕೆ 6 ಮನೆಗಳು ಬಿದ್ದಿವೆ. ಕೆರೆ ಕಟ್ಟೆಗಳು ತುಂಬಿ ಹರಿದಿವೆ. ಕೆಲವೆಡೆ ಬೆಳೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ. ದಾವಣಗೆರೆ ನಗರದಲ್ಲಿ ತಡರಾತ್ರಿ 4 ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದ್ದರಿಂದ ಸರಸ್ವತಿ ಬಡಾವಣೆ, ದೇವರಾಜ ಅರಸು ಬಡಾವಣೆ, ನಿಟ್ಟುವಳ್ಳಿ ಮುಂತಾದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಸ್ಥಳೀಯರ ನಿದ್ದೆಗೆಡಿಸಿತು. ಆ ನೀರನ್ನು ಹೊರ ಹಾಕಲು ನಿವಾಸಿಗಳು ಪ್ರಯಾಸ ಪಡಬೇಕಾಯಿತು. ಚನ್ನಗಿರಿ ತಾಲೂಕಿನಲ್ಲಿ 32.9 ಮಿ.ಮೀ, ದಾವಣಗೆರೆ 41.4 ಮಿ.ಮೀ, ಹರಿಹರ 35.9 ಮಿ.ಮೀ, ಹೊನ್ನಾಳಿ 18.3 ಮಿ.ಮೀ, ಜಗಳೂರು 42.3 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 2.5 ಮಿ.ಮೀ. ಮಳೆ ಸುರಿದಿದೆ. ...