ಅಬ್ಬರಿಸಿದ ಮಳೆ, ಕೆರೆಯಂತಾದ ರಸ್ತೆಗಳು

dvg-rain-3.jpg
Published on

ದಾವಣಗೆರೆ : ದಾವಣಗೆರೆಯಲ್ಲಿ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಅಬ್ಬರಿಸಿದ್ದರಿಂದ ರಸ್ತೆಗಳು ಜಲಾವೃತಗೊಂಡು ಕೆರೆಯಂತಾಗಿದ್ದವು. ಕೆಲವು ಕಡೆ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಅರ್ಧ ಮುಳುಗಡೆಯಾಗಿದ್ದವು. ರೈಲ್ವೆ ಕೆಳಸೇತುವೆ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು.  ನಗರ ಹೊರ ವಲಯದ ಬಾಲಾಜಿ ಸರ್ಕಲ್ ಸುತ್ತಮುತ್ತ ಖಾಲಿ ನಿವೇಶನಗಳಲ್ಲಿ ನೀರು ತುಂಬಿಕೊಂಡಿತ್ತು. ಚರಂಡಿಗಳು ಕಟ್ಟಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿಯಿತು. ಮಳೆ ಸೃಷ್ಟಿಸಿದ ಅವಾಂತರದಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.  ಇಲ್ಲಿನ ಪಿಬಿ ರಸ್ತೆ, ವಿನೋಬ ನಗರದ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆ ರಸ್ತೆಗಳು ಜಲಾವೃತವಾಗಿದ್ದವು. ಅದರಲ್ಲಿಯೇ ವಾಹನ ಸವಾರರು ಕಷ್ಟಪಟ್ಟು ಚಾಲನೆ ಮಾಡಿದರು. ಹದಡಿ ರಸ್ತೆಯಲ್ಲಿ ವಿದ್ಯಾರ್ಥಿ ಭವನ ಸಮೀಪ ಸೇರಿದಂತೆ ಅಲ್ಲಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಮಳೆ ನೀರಿನೊಂದಿಗೆ ಚರಂಡಿಯ ಕೊಳಚೆಯೂ ಸೇರಿಕೊಂಡಿದ್ದರಿಂದ ದುರ್ನಾತ ಇಡುಗಿತ್ತು.  ಶಂಕರ್ ವಿಹಾರ ಬಡಾವಣೆ, ಸಿದ್ದವೀರಪ್ಪ ಬಡಾವಣೆ, ವಿನೋಬ ನಗರ, ಬನಶಂಕರಿ ಬಡಾವಣೆಯಲ್ಲಿ ನೀರು ನಿಂತು ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸಿದರು.  ಆಗಾಗ ಸ್ವಲ್ಪ ಕಡಿಮೆಯಾದಂತೆನಿಸಿ ಇದ್ದಕ್ಕಿದ್ದಂತೆ ರಭಸವಾಗಿ ಸುರಿಯಿತು. ಮಳೆಯ ಹೊಡೆತಕ್ಕೆ ವಾಹನ ಸವಾರರು ಪರದಾಡಿದರು. ಕೆಲವರು ಜರ್ಕಿನ್, ಕೊಡೆಗಳ ಮೊರೆ ಹೋದರು. ಅನೇಕರು ಮಳೆ ನೀರಿನಲ್ಲಿ ತೊಯ್ದು ತೊಪ್ಪೆಯಾದರು. ಜತೆಗೆ ಗಾಳಿಯೂ ಬೀಸಿದ್ದರಿಂದ ತಂಪಿನ ಅನುಭವ ನೀಡಿತು. ಇಡೀ ದಿನ ಮಳೆಯ ವಾತಾವರಣವಿತ್ತು.  ಬಿಡುವಿಲ್ಲದಂತೆ ಸುರಿದ ಮಳೆಯು ವ್ಯಾಪಾರ, ವಹಿವಾಟಿನ ಮೇಲೆ ಪರಿಣಾಮ ಬೀರಿತು. ಅಂಗಡಿಗಳಿಗೆ ಗ್ರಾಹಕರು ಬರುವುದು ಕಡಿಮೆಯಾಗಿತ್ತು. ಬೀದಿ ಬದಿ ವ್ಯಾಪಾರಸ್ಥರು ಹೆಚ್ಚು ತೊಂದರೆ ಅನುಭವಿಸಿದರು. ಹಣ್ಣು, ತರಕಾರಿ ಇತ್ಯಾದಿ ಪದಾರ್ಥಗಳನ್ನು ರಸ್ತೆ ಬದಿಯಲ್ಲೇ ಬಿಟ್ಟು ಹೋಗಿದ್ದರು. ಕೆಲವು ಬೈಕ್ ಸವಾರರು ಟವಲ್ ಹಿಡಿದುಕೊಂಡು ಮಳೆಯಿಂದ ರಕ್ಷಣೆ ಪಡೆದರು.  ಪಾದಚಾರಿಗಳು, ವಾಹನ ಸವಾರರು ರಸ್ತೆ ಬದಿಯ ಅಂಗಡಿ, ಮುಂಗಟ್ಟು, ಪೆಟ್ರೋಲ್ ಬಂಕ್, ಬಸ್ ತಂಗುದಾಣ ಮುಂತಾದ ಕಡೆ ಆಶ್ರಯ ಪಡೆದರು. ಯಾವುದೋ ಕೆಲಸಕ್ಕೆಂದು ಹೊರಟವರು ಮಾರ್ಗ ಮಧ್ಯದಲ್ಲೇ ಸಿಕ್ಕಿ ಹಾಕಿಕೊಂಡರು. ಮಹಿಳೆಯರು, ಮಕ್ಕಳು ಮಳೆ ನಿಲ್ಲುವುದನ್ನೇ ಕಾಯುತ್ತಿದ್ದರು.  ಮೋಡ ಕವಿದಿದ್ದರಿಂದ ಮಟ ಮಟ ಮಧ್ಯಾಹ್ನವೇ ಮಂದ ಬೆಳಕು ಆವರಿಸಿತ್ತು. ಕಾರು, ಆಟೋ, ಬೈಕ್ ಇನ್ನಿತರ ವಾಹನ ಚಾಲಕರು ಲೈಟ್ ಹಾಕಿಕೊಂಡೇ ಸಂಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net