

ದಾವಣಗೆರೆ : ಹೊನ್ನಾಳಿ ತಾಲೂಕಿನಲ್ಲಿ 2 ಕೋಟಿ ರೂ. ನಷ್ಟ ವಿಜಯವಾಣಿ ಸುದ್ದಿಜಾಲ ಹೊನ್ನಾಳಿ ಶನಿವಾರ ಸಂಜೆ ಬಿರುಗಾಳಿ ಹಾಗೂ ಗುಡುಗು ಸಹಿತ ಸುರಿದ ಭಾರೀ ಮಳೆಗೆ ತಾಲೂಕಿನಲ್ಲಿ ಅಡಕೆ ಮತ್ತು ಮೆಕ್ಕೆಜೋಳ ಬೆಳೆಗಳು ನೆಲಕಚ್ಚಿದ್ದು ಒಟ್ಟಾರೆ 2 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ. ಆರು ಹೆಕ್ಟೇರ್ ಪ್ರದೇಶದಲ್ಲಿ ಫಲ ಬರುತ್ತಿದ್ದ ಅಡಕೆ ಮರಗಳು, ಒಂದು ಎಕರೆಯಲ್ಲಿ ಬೆಳೆದಿದ್ದ ತೆಂಗು, 188 ಎಕರೆ ಮೆಕ್ಕೆಜೋಳ ಇನ್ನಿತರ ಕೃಷಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ತಾಲೂಕಿನ ಅರಕೆರೆ, ಮಾಸಡಿ, ತರಗನಹಳ್ಳಿ, ಗೋಣಿಗೆರೆ ರಸ್ತೆಗಳಲ್ಲಿ ಮರಗಳು ರಸ್ತೆಗೆ ಬಿದ್ದ ಪರಿಣಾಮ ಎರಡು ಗಂಟೆ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಬಿದಿರಗಡ್ಡೆ, ಹೊಳೆಮಾದಾಪುರ, ಕ್ಯಾಸಿನಕೆರೆ, ಅರಕೆರೆ, ಹಳೇದೇವರ ಹೊನ್ನಾಳಿ, ಲಿಂಗಾಪುರ, ಬಾಗೆವಾಡಿ, ರಾಂಪುರ ಇತರ ಗ್ರಾಮಗಳಲ್ಲಿ 53 ವಿದ್ಯುತ್ ಕಂಬಗಳು ನೆಲಕ್ಕುರುಳಿ ಗ್ರಾಮಾಂತರ ಪ್ರದೇಶದಲ್ಲಿ 3 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ತಹಸೀಲ್ದಾರ್ ಭೇಟಿ ; ತಹಸೀಲ್ದಾರ್ ಪಟ್ಟರಾಜಗೌಡ, ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ಇನ್ನಿತರ ಅಧಿಕಾರಿಗಳು ಮಳೆಯಿಂದ ಹಾನಿಯಾದ ಅಡಕೆ, ತೆಂಗು ಹಾಗೂ ಮೆಕ್ಕೆಜೋಳವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿ, ಇನ್ನೆರಡು ದಿನಗಳಲ್ಲಿ ಮಳೆಯಿಂದ ಹಾನಿಯಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಸಮೀಕ್ಷೆ ಮಾಡಿಸಿ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ಕೊಡಲಾಗವುದು ಎಂದು ತಿಳಿಸಿದರು. ರೈತರು ತಮ್ಮ ಮಕ್ಕಳಂತೆ ಸಾಕಿದ್ದ ಅಡಕೆ ಹಾಗೂ ತೆಂಗಿನ ಮರಗಳು ಫಲ ನೀಡುತ್ತಿದ್ದವು. ಮಳೆಯಿಂದ ನಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ಮಾಸಡಿ ಗ್ರಾಮದ ರೈತ ಬಸವರಾಜಪ್ಪ ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು. ಬೆಳೆ ಸಂಪೂರ್ಣ ನಾಶ ; ತಾಲೂಕಿನ ಮಾಸಡಿ ಗ್ರಾಮದ ಸರ್ವೆ ನಂಬರ್ 72/1 ರಲ್ಲಿ ಬರುವ ಸುಮಾರು ಮೂರು ಎಕರೆಯಲ್ಲಿ ಬೆಳೆದಿದ್ದ 600 ಅಡಕೆ ಮರಗಳು ಬುಡ ಸಮೇತ ನೆಲಕ್ಕುರುಳಿವೆ. ಇದರಿಂದ ರೈತ ಮಂಜಪ್ಪ ತೀವ್ರ ಆತಂಕದಲ್ಲಿದ್ದಾರೆ. ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಕುಮಾರ್ ನಾಯ್ಕ, ರಾಜಸ್ವ ನಿರೀಕ್ಷಕರಾದ ಸುಧೀರ್, ರಮೇಶ್ ಗ್ರಾಮ ಲೆಕ್ಕಾಧಿಕಾರಿಗಳಾದ ದೊಡ್ಡೇಶ್, ಬಸವರಾಜು, ರಮೇಶ್, ಗ್ರಾಮ ಸಹಾಯಕರಾದ ಸಂಜೀವ್ ಹಾಗೂ ಶಿವಕುಮಾರ್ ಇದ್ದರು.