

ದಾವಣಗೆರೆ : ಜಿಲ್ಲೆಯಲ್ಲಿ ಬುಧವಾರ ಬೆಳಗಿನ ಜಾವ 34.7 ಮಿ.ಮೀ. ಮಳೆಯಾಗಿದ್ದು ಅವಾಂತರ ಸೃಷ್ಟಿಸಿದೆ. 70 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಜಲಾವೃತವಾಗಿವೆ. 22 ಮನೆಗಳಿಗೆ ಹಾನಿ ಸಂಭವಿಸಿದ್ದು ಒಟ್ಟಾರೆ 28 ಲಕ್ಷ ರೂ. ನಷ್ಟವಾಗಿದೆ. ಮೆಕ್ಕೆಜೋಳ, ಈರುಳ್ಳಿ ಮತ್ತು ಅಡಕೆ ಬೆಳೆಗಳು ತಲಾ 20 ಹೆಕ್ಟೇರ್ ಪ್ರದೇಶದಲ್ಲಿ, ರಾಗಿ 10 ಹೆಕ್ಟೇರ್ ಹಾನಿಯಾಗಿದೆ. ಮಳೆಯಿಂದಾಗಿ ದಾವಣಗೆರೆ ನಗರದ ಕೊಟ್ಟೂರೇಶ್ವರ ಬಡಾವಣೆಯ 10 ಮನೆಗಳಿಗೆ ನೀರು ನುಗ್ಗಿತ್ತು. ಬಂಬೂಬಜಾರ್, ಶೇಖರಪ್ಪ ನಗರ, ಬೇತೂರು ರಸ್ತೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ನಿವಾಸಿಗಳು ನೀರನ್ನು ಹೊರ ಹಾಕುವ ದೃಶ್ಯ ಕಂಡುಬಂದಿತು. ದಾವಣಗೆರೆ ತಾಲೂಕು ಆವರಗೊಳ್ಳ ಗ್ರಾಮದ ಹಳ್ಳದಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿ ಹಳ್ಳದ ರಸ್ತೆ ಹಾಳಾಗಿದೆ. ಆವರಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೀರು ನಿಂತಿತ್ತು. ಜಗಳೂರು ತಾಲೂಕಿನಲ್ಲಿ ಅತಿ ಹೆಚ್ಚು 71.7 ಮಿ.ಮೀ, ದಾವಣಗೆರೆ 44.8 ಮಿ.ಮೀ, ಚನ್ನಗಿರಿ 19.4 ಮಿ.ಮೀ, ಹರಿಹರ 21.7 ಮಿ.ಮೀ, ಹೊನ್ನಾಳಿ 12.1 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 8.9 ಮಿ.ಮೀ. ಮಳೆಯಾಗಿದೆ.