

ದಾವಣಗೆರೆ : ರಾಜ್ಯದಲ್ಲಿ 25-40 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಳೆಯ ಯೋಜನೆಗಳಿಗೆ ವೇಗ ನೀಡಲಾಗುತ್ತಿದೆ. 39 ಸಾವಿರ ಕೋಟಿ ರೂ. ವೆಚ್ಚದಲ್ಲಿ 2028 ರ ಒಳಗಾಗಿ ಹಂತ ಹಂತವಾಗಿ ಅವುಗಳನ್ನು ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 15 ರಂದು ಗದಗ-ತಳಕವಾಡಿ-ಕುಷ್ಟಗಿ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡಲಾಗುವುದು. ಸಿಂಧನೂರು-ರಾಯಚೂರು ಮಾರ್ಗದ ಕೆಲಸ ಆರಂಭವಾಗಿದೆ. ಲೋಕಾಪುರ-ಕಾಚಿಗುಡ ಮಾರ್ಗದ ಕಾಮಗಾರಿ ಒಂದೂವರೆ ತಿಂಗಳಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು. ಹತ್ತಾರು ವರ್ಷಗಳಿಂದಲೂ ಆಗದ ರೈಲ್ವೆ ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿಗಳಿಗೂ ಒತ್ತು ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಲೆವೆಲ್ ಕ್ರಾಸಿಂಗ್‌ಗಳಿಂದ ಅನೇಕ ಪ್ರಾಣ ಹಾನಿಯಾಗುತ್ತದೆ. ಕಾವಲುಗಾರರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಲೆವೆಲ್ ಕ್ರಾಸಿಂಗ್‌ಗಳಿಗೂ ಮುಕ್ತಿ ನೀಡಲಾಗುವುದು ಎಂದರು. ರೈಲ್ವೆ ಸುರಕ್ಷತೆಗೂ ಒತ್ತು ಕೊಡಲಾಗಿದೆ. ಕವಚ್ ಹೆಸರಿನಡಿ 10 ಸಾವಿರ ಕಿ.ಮೀ. ಮಾರ್ಗದಲ್ಲಿ ಅಪಘಾತಗಳನ್ನು ತಡೆಯಲು ಪ್ರಾಯೋಗಿಕವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದರ‌್ಲಲಿ ಕರ್ನಾಟಕದಲ್ಲಿ 1800 ಕಿ.ಮೀ. ಬರಲಿದೆ ಎಂದು ತಿಳಿಸಿದರು. ಹಳೆಯ ಬೋಗಿಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಹಳಿ ತಪ್ಪುವ ಪ್ರಸಂಗಗಳು ಕಡಿಮೆಯಾಗುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ದೇಶದಲ್ಲಿ 1 ಲಕ್ಷ ಕಿ.ಮೀ.ಗೂ ಹೆಚ್ಚಿನ ರೈಲ್ವೆ ಮಾರ್ಗವಿದೆ. ಅದರ ಮೇಲೆ ಭಾರವಾಗದ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು. ಬೆಂಗಳೂರು-ತುಮಕೂರು ಮಧ್ಯೆ ಎರಡು ಪಥಗಳಿದ್ದ ಮಾರ್ಗವನ್ನು ನಾಲ್ಕು ಪಥಗಳಿಗೆ ವಿಸ್ತರಿಸಲಾಗಿದೆ. ಶೀಘ್ರವೇ ಅದಕ್ಕೆ ಸಚಿವ ಸಂಪುಟ ಅನುಮೋದನೆ ದೊರೆಯಲಿದೆ ಎಂದು ತಿಳಿಸಿದರು. ಕನ್ನಡ ಸೇರಿ 10 ಸ್ಥಳೀಯ ಭಾಷೆಗಳಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಆದರೆ ಬೇರೆ ರಾಜ್ಯಗಳ ಅಭ್ಯರ್ಥಿಗಳಿಗೆ ಹೋಲಿಸಿದಾಗ ಕರ್ನಾಟಕದ ಅಭ್ಯರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಅಭ್ಯರ್ಥಿಗಳು ಕನ್ನಡದಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ ಬರೆದು ಉದ್ಯೋಗ ಪಡೆದುಕೊಳ್ಳಬೇಕಂದು ಮನವಿ ಮಾಡಿದರು. ಹರಿಹರ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮುಖಂಡರಾದ ವೀರೇಶ ಹನಗವಾಡಿ, ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್, ಎ.ವೈ. ಪ್ರಕಾಶ್, ಶ್ರೀನಿವಾಸ ದಾಸಕರಿಯಪ್ಪ, ಅಣಬೇರು ಜೀವನಮೂರ್ತಿ, ಎನ್.ಎ. ಮುರುಗೇಶ ಇದ್ದರು. ...