

ದಾವಣಗೆರೆ : ಟಾಟಾನಗರ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಂಡುಬಂದ ವಾರಸುದಾರರಿಲ್ಲದ 2 ಸೂಟ್‌ಕೇಸ್‌ಗಳಲ್ಲಿ ಪತ್ತೆಯಾದ 33 ಕೆಜಿ 500 ಗ್ರಾಂ ತೂಕದ ಗಾಂಜಾವನ್ನು ದಾವಣಗೆರೆ ರೈಲ್ವೆ ಪೊಲೀಸರು ಇತ್ತೀಚೆಗೆ ವಶಪಡಿಸಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ರೈಲಿನ ಎ-3 ಬೋಗಿಯಲ್ಲಿ ಎರಡು ಟ್ರಾಲಿ ಸೂಟ್‌ಕೇಸ್ ಇರುವುದನ್ನು ಇಲಾಖೆಯ ಅಧಿಕಾರಿ (ಟಿಟಿಇ) ವೀಣಾ ಅವರು ಗುರುತಿಸಿ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ವಿಚಾರಿಸಿದಾಗ ವಾರಸುದಾರರು ಯಾರೂ ಇರಲಿಲ್ಲ.
ಆದ್ದರಿಂದ ಆ ಸೂಟ್‌ಕೇಸ್‌ಗಳನ್ನು ವೀಣಾ ಅವರು ಚಿತ್ರದುರ್ಗದ ರೈಲು ನಿಲ್ದಾಣದಲ್ಲಿ ಇಳಿಸಿ, ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್ ಪುಷ್ಪಲತಾಬಾಯಿ ಅವರಿಗೆ ಹಸ್ತಾಂತರಿಸಿದರು.
ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಎಎಸ್‌ಐ ನಾಗರಾಜ್, ಹೆಡ್ ಕಾನ್‌ಸ್ಟೇಬಲ್‌ಗಳಾದ ಶ್ರೀನಿವಾಸ್, ಹನುಮಂತಪ್ಪ, ಪೊಲೀಸ್ ಕಾನ್‌ಸ್ಟೇಬಲ್ ರಾಘವೇಂದ್ರ ಅವರಿದ್ದ ತಂಡ ಸ್ಥಳಕ್ಕೆ ತೆರಳಿ ಸೂಟ್‌ಕೇಸ್‌ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಮಾದಕವಸ್ತು ಗಾಂಜಾ ಪತ್ತೆಯಾಯಿತು.
ಗಾಂಜಾವನ್ನು ಯಾರೋ ಅಕ್ರಮವಾಗಿ ರೈಲಿನಲ್ಲಿ ಸಾಗಾಣಿಕೆ ಮಾಡಿಕೊಂಡು ಬಂದು ಎರಡೂ ಸೂಟ್‌ಕೇಸ್‌ಗಳನ್ನು ರೈಲಿನಲ್ಲೇ ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ 8 ಬಂಡಲ್‌ಗಳಿದ್ದು 33.50 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ.
ಬೆಂಗಳೂರಿನ ರೈಲ್ವೇಸ್ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ. ಎಸ್.ಡಿ. ಶರಣಪ್ಪ, ಪೊಲೀಸ್ ಅಧೀಕ್ಷಕಿ ಡಾ.ಕೆ.ಎಸ್. ಸೌಮ್ಯಲತಾ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ರವಿಕುಮಾರ್ ನೇತೃತ್ವದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ಎಂ. ಪಾಟೀಲ್ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಯಿತು.