ರೈಲ್ವೆ ಹಳಿ ನಡುವೆ ಬಿದ್ದು ಪ್ರಾಣಾಪಾಯದಿಂದ ಪಾರಾದ ಶಿಕ್ಷಕ

dvg-Shivamurthy-14.jpg
Published on

ದಾವಣಗೆರೆ : ನಗರದ ರೈಲು ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಶಿಕ್ಷಕರೊಬ್ಬರು ಗೂಡ್ಸ್ ರೈಲಿನ ಇಂಜಿನ್ ತಾಗಿ, ಹಳಿಗಳ ನಡುವೆ ಬಿದ್ದು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
 ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಬಿ ದುರ್ಗದ ಕಾಶಿ ಮಹಾಲಿಂಗಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಮೂರ್ತಿ ಹಳಗಣ್ಣನವರ್ ಅಪಾಯದಿಂದ ಪಾರಾದವರು. ದಾವಣಗೆರೆಯ ಸರಸ್ವತಿ ನಗರ ನಿವಾಸಿಯಾಗಿರುವ ಅವರು ಪ್ರತಿ ದಿನ ರೈಲಿನಲ್ಲಿ ಪ್ರಯಾಣಿಸುತ್ತಾರೆ.
 ಅವರು ತೆರಳಬೇಕಿದ್ದ ಧಾರವಾಡ-ಬೆಂಗಳೂರು ಇಂಟರ್‌ಸಿಟಿ ರೈಲು ಬೆಳಗ್ಗೆ 8.21ಕ್ಕೆ ದಾವಣಗೆರೆ ರೈಲು ನಿಲ್ದಾಣದ 2ನೇ ಪ್ಲಾೃಟ್‌ಫಾರ್ಮ್‌ಗೆ ಬಂದು ನಿಂತಿತ್ತು. ಆ ರೈಲು ಹತ್ತಬೇಕಿದ್ದ ಶಿವಮೂರ್ತಿ ಅವರು 1ನೇ ಪ್ಲಾೃಟ್‌ಫಾರ್ಮ್‌ನಿಂದ ಕೆಳಗಿಳಿದು ಹಳಿಗಳನ್ನು ದಾಟಿ ಹೋಗುವ ಪ್ರಯತ್ನದಲ್ಲಿದ್ದಾಗ ಈ ಘಟನೆ ನಡೆದಿದೆ.
 ಅವರು 1ನೇ ಹಳಿಯನ್ನು ದಾಟಿ 2ನೇ ಹಳಿಗೆ ಕಾಲಿಟ್ಟಾಗ ಆಯಿಲ್ ಟ್ಯಾಂಕರ್‌ಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲು ತೋಳಹುಣಸೆ ಕಡೆಯಿಂದ ನಿಧಾನವಾಗಿ ಬರುತ್ತಿತ್ತು. ಅದನ್ನು ಅವರು ಗಮನಿಸಲಿಲ್ಲ. ರೈಲಿನ ಇಂಜಿನ್ ತಾಗಿದ್ದರಿಂದ ಅವರು ಆಯತಪ್ಪಿ ಸರಿಯಾಗಿ ಹಳಿಗಳ ನಡುವೆ ಬಿದ್ದರು.
 ಕೂಡಲೇ ಚಾಲಕ ಬ್ರೇಕ್ ಹಾಕಿದ್ದರಿಂದ ರೈಲು ಸ್ವಲ್ಪ ದೂರ ಕ್ರಮಿಸಿ ನಿಂತಿತು. ಶಿವಮೂರ್ತಿ ಅವರು ರೈಲಿನ ಕೆಳಗೆ ಇದ್ದರೂ, ಹಳಿಗಳ ನಡುವೆ ಮಲಗಿದ್ದರಿಂದ ಸಣ್ಣ ಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಯಾವುದೇ ಅಪಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
 ರೈಲ್ವೆ ರಕ್ಷಣಾ ದಳದ (ಆರ್.ಪಿ.ಎಫ್) ಕಾನ್‌ಸ್ಟೇಬಲ್ ಶ್ರೀಧರ್ ಮತ್ತು ಪ್ರಯಾಣಿಕರು ಕೂಡಲೇ ಧಾವಿಸಿ ಶಿವಮೂರ್ತಿ ಅವರನ್ನು ರಕ್ಷಿಸಿದರು. ನಂತರ ಆರ್.ಪಿ.ಎಫ್ ಕಚೇರಿಯಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳಿಸಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net