ಅನಾಥ ಶವಗಳಿಗೆ ರೈಲ್ವೆ ಪೊಲೀಸರೇ ಬಂಧುಗಳು!

dvg-railway-police.jpg
Published on

ರಮೇಶ ಜಹಗೀರದಾರ್ ದಾವಣಗೆರೆ : ರೈಲ್ವೆ ಪೊಲೀಸರಿಗೆ ಅನಾಥ ಶವಗಳ ವಿಲೇವಾರಿಯೇ ದೊಡ್ಡ ಸವಾಲು. ರಾಜ್ಯದ 18 ರೈಲ್ವೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವರ್ಷಕ್ಕೆ ಸಾವಿರಕ್ಕೂ ಹೆಚ್ಚು ಅಸಹಜ ಸಾವುಗಳಾಗುತ್ತವೆ. ವಾರಸುದಾರರಿಲ್ಲದ ನೂರಾರು ಮೃತದೇಹಗಳಿಗೆ ಆ ಸಿಬ್ಬಂದಿಯೇ ಬಂಧುಗಳಂತೆ ನಿಂತು ಪುಣ್ಯದ ಕೆಲಸವೆಂದು ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ.  ಮೃತ ವ್ಯಕ್ತಿಯ ಚಹರೆ ವಿವರದೊಂದಿಗೆ ಅಲೆದಾಡುವುದರಿಂದ ಹಿಡಿದು, ಗುರುತು ಪತ್ತೆಯಾಗದಿದ್ದರೆ ಗೌರವ ಪೂರ್ವಕವಾಗಿ ಅಂತಿಮ ವಿದಾಯ ಸಲ್ಲಿಸುವ ವರೆಗೆ ರೈಲ್ವೆ ಪೊಲೀಸರ ಕೆಲಸ ಸುಲಭವಲ್ಲ.  ರಾಜ್ಯದ ರೈಲ್ವೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 2024 ರಲ್ಲಿ 1685 ಅಸಹಜ ಸಾವು ಕೇಸ್‌ಗಳಾಗಿದ್ದವು. ಅವುಗಳಲ್ಲಿ 480 ಅನಾಥ ಶವಗಳಿದ್ದವು. ಈ ವರ್ಷ ಸೆಪ್ಟೆಂಬರ್ ಅಂತ್ಯದ ವರೆಗೆ 1131 ಪ್ರಕರಣಗಳಾಗಿದ್ದು ಅವುಗಳಲ್ಲಿ 302 ಶವಗಳ ಗುರುತು ಸಿಕ್ಕಿಲ್ಲ. ಬೆಂಗಳೂರು ನಗರದ ರೈಲ್ವೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚು.

 ...    (ಬಾಕ್ಸ್)  

ಭೀಕರ ದೃಶ್ಯಗಳು  

ಪ್ರತಿ ರೈಲ್ವೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತಿಂಗಳಿಗೆ ಸರಾಸರಿ 8 ರಿಂದ 10 ಅಸಹಜ ಸಾವು ಪ್ರಕರಣಗಳು ಸಂಭವಿಸುತ್ತವೆ. ಅವುಗಳಲ್ಲಿ 2 ರಿಂದ 3 ಕೇಸ್‌ನ ಗುರುತು ಪತ್ತೆಯಾಗುವುದಿಲ್ಲ.  ಶೇ. 80 ರಷ್ಟು ಆತ್ಮಹತ್ಯೆ ಪ್ರಕರಣಗಳೇ ಆಗಿರುತ್ತವೆ. ಇನ್ನುಳಿದವುಗಳಲ್ಲಿ ರೈಲಿನಿಂದ ಆಯ ತಪ್ಪಿ ಬಿದ್ದವರು, ಹಳಿ ದಾಟುವಾಗ ಆಕಸ್ಮಿಕವಾಗಿ ಅಪಘಾತವಾಗುವ ಸಾಧ್ಯತೆ ಇರುತ್ತದೆ.  ಕೆಲವು ಮೃತದೇಹಗಳು ಛಿದ್ರವಾಗಿ ಬಿದ್ದಿರುತ್ತವೆ. ತಲೆಗೆ, ಕೈ-ಕಾಲಿಗೆ ಗಂಭೀರ ಗಾಯಗಳಾಗಿ ಸಾವಾಗಿರುತ್ತದೆ. ಇನ್ನೂ ಕೆಲವು ದೇಹಗಳು ರೈಲಿನ ಗಾಲಿಗೆ ಸಿಲುಕಿ ದೂರಕ್ಕೆ ಹೋಗಿ ಬಿದ್ದಿರುತ್ತವೆ. ರುಂಡ-ಮುಂಡ ಬೇರ್ಪಟ್ಟ ದೃಶ್ಯಗಳೂ ಕಂಡುಬರುತ್ತವೆ.  ರೈಲ್ವೆ ಇಲಾಖೆಯ ಕೀಮ್ಯಾನ್‌ಗಳು, ಲೋಕೋ ಪೈಲಟ್‌ಗಳು, ಗಾರ್ಡ್ ಹಾಗೂ ಸಾರ್ವಜನಿಕರು ಇಂಥ ಕೇಸ್ ಗಮನಕ್ಕೆ ಬಂದಾಗ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.  ...  

 (ಬಾಕ್ಸ್)

 ತನಿಖೆಯ ಜಾಡು  

ಘಟನಾ ಸ್ಥಳದಲ್ಲಿ ಪಂಚನಾಮೆ ನಡೆಸುವಾಗ ಯಾವುದಾದರೂ ಚೀಟಿ, ಗುರುತಿನ ಕಾರ್ಡ್ ಅಥವಾ ಮೊಬೈಲ್ ಸಿಕ್ಕರೆ ಅದರ ಸುಳಿವಿನ ಜಾಡು ಹಿಡಿದು ತನಿಖೆ ಕೈಗೆತ್ತಿಕೊಳ್ಳಲಾಗುತ್ತದೆ.  ಶವಾಗಾರದಲ್ಲಿಟ್ಟು ವಾರಸುದಾರರಿಗಾಗಿ ಕಾಯಲಾಗುತ್ತದೆ. ಕುಟುಂಬದ ಸದಸ್ಯರು ಬಂದರೆ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತದೇಹವನ್ನು ಅವರಿಗೆ ಹಸ್ತಾಂತರಿಸಲಾಗುತ್ತದೆ.  ಗುರುತು ಪತ್ತೆ ಹಚ್ಚುವುದೇ ದೊಡ್ಡ ಸವಾಲು. ಚಹರೆ ಪಟ್ಟಿ ಹಿಡಿದು ವಿವಿಧ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ. ಸಾರ್ವಜನಿಕರನ್ನು ಕೇಳಬೇಕಾಗುತ್ತದೆ. ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತದೆ. ವಿಳಾಸ ಹುಡುಕಿಕೊಂಡು ಟೈಲರ್, ಆಭರಣದ ಅಂಗಡಿಗಳಿಗೂ ಹೋಗುವ ಸಂದರ್ಭಗಳಿರುತ್ತವೆ. ಅಗತ್ಯವೆನಿಸಿದರೆ ಡಿಎನ್‌ಎ ಪರೀಕ್ಷೆಯನ್ನೂ ಮಾಡಿಸಲಾಗುತ್ತದೆ. ಪತ್ರಿಕೆ, ಆಕಾಶವಾಣಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೈಗೊಳ್ಳಬೇಕಾಗುತ್ತದೆ.

 ...    (ಬಾಕ್ಸ್)  

ಗೌರವದ ಅಂತಿಮ ವಿದಾಯ  

ಏಳು ದಿನಗಳು ಕಳೆದರೂ ಸಂಬಂಧಪಟ್ಟವರು ಯಾರೂ ಬರದಿದ್ದರೆ ರೈಲ್ವೆ ಪೊಲೀಸರೇ ಅಂತ್ಯಸಂಸ್ಕಾರದ ವ್ಯವಸ್ಥೆ ಮಾಡುತ್ತಾರೆ. ಈ ಉದ್ದೇಶಕ್ಕಾಗಿ ರೈಲ್ವೆ ಇಲಾಖೆಯಿಂದ 5 ಸಾವಿರ ರೂ. ನೀಡುತ್ತಾರೆ.  ಸ್ಥಳೀಯ ಸಂಸ್ಥೆಯ ಪೌರ ಕಾರ್ಮಿಕರನ್ನು ಕರೆಸಿ, ಜೆಸಿಬಿ ಸಹಾಯದಿಂದ ಗುಂಡಿ ತೋಡಿಸಿ ಅಂತ್ಯಸಂಸ್ಕಾರ ಕೈಗೊಳ್ಳಲಾಗುತ್ತದೆ. ಶವದ ಮೇಲೆ ಬಟ್ಟೆ ಹೊದಿಸಿ, ಹೂವಿನ ಹಾರ ಹಾಕಿ ಗೌರವ ಪೂರ್ವಕವಾಗಿಯೇ ಅಂತಿಮ ವಿದಾಯ ಹೇಳಲಾಗುತ್ತದೆ.  ...    

(ಕೋಟ್)  

ಕೆಲವು ಪ್ರಕರಣಗಳಲ್ಲಿ ವ್ಯಕ್ತಿಯ ಮುಖ ಗುರುತು ಸಿಗದಂತೆ ಆಗಿರುತ್ತದೆ. ಅವುಗಳನ್ನು ಪತ್ತೆ ಹಚ್ಚುವುದು ಕಠಿಣ. ವ್ಯಕ್ತಿಯ ಹೆಬ್ಬೆರಳಿನ ಗುರುತಿನ ಸಹಾಯದಿಂದ (ಥಂಬ್) ಪತ್ತೆಹಚ್ಚುವ ವ್ಯವಸ್ಥೆ ಮಾಡಿದರೆ ಒಳ್ಳೆಯದು. ದೂರದ ಊರುಗಳಲ್ಲಿ ಪ್ರಕರಣ ನಡೆದಿದ್ದರೆ ಶವವನ್ನು ಅಲ್ಲಿಂದ ತರಿಸುವುದಕ್ಕೆ ವಾಹನ ಬಾಡಿಗೆ ದುಬಾರಿಯಾಗುತ್ತದೆ.   ಎ. ಕೃಷ್ಣಾ ನಾಯ್ಕ, ಪೊಲೀಸ್ ಇನ್‌ಸ್ಪೆಕ್ಟರ್

 * 2024ರಲ್ಲಿ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 258 ಮೃತದೇಹಗಳು ಸಿಕ್ಕಿದ್ದು ಅವುಗಳಲ್ಲಿ 95ರ ಗುರುತು ಪತ್ತೆಯಾಗಿಲ್ಲ. ಬೆಂಗಳೂರು ದಂಡು ವ್ಯಾಪ್ತಿಯಲ್ಲಿ 141 ರಲ್ಲಿ 39, ಎಸ್.ಬಿ.ಸಿ ವ್ಯಾಪ್ತಿಯ 195 ರಲ್ಲಿ 84 ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಬೈಯಪ್ಪನಹಳ್ಳಿ: 124 ರಲ್ಲಿ 24 ಶವಗಳು ಅನಾಥ.    * ದಾವಣಗೆರೆ ಜಿಲ್ಲೆಯಲ್ಲಿ 2024 ರಲ್ಲಿ ಒಟ್ಟು 84 ಅಸಹಜ ಸಾವುಗಳಲ್ಲಿ 19 ಗುರುತು ಪತ್ತೆಯಾಗಿಲ್ಲ. 2025 (ಸೆಪ್ಟೆಂಬರ್ ಅಂತ್ಯದ ವರೆಗೆ) ರಲ್ಲಿ ಒಟ್ಟು 58 ರಲ್ಲಿ 16 ಅನಾಥ ಶವಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net