

ದಾವಣಗೆರೆ : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಬಿ. ರವಿ ಅವರ ಕಚೇರಿ ಹಾಗೂ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ಆದಾಯಕ್ಕಿಂತ ಅಧಿಕ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 4 ಕಡೆ ಕಾರ್ಯಾಚರಣೆ ನಡೆಸಲಾಯಿತು. ನಗರದಲ್ಲಿರುವ ಕಚೇರಿ ಹಾಗೂ ಅವರ ಅತ್ತೆಯ ಮನೆ, ಚಿತ್ರದುರ್ಗ ಮತ್ತು ಚಳ್ಳಕೆರೆಯಲ್ಲೂ ದಾಳಿ ನಡೆಸಲಾಯಿತು. ಕಾರ್ಯಾಚರಣೆಯ ವೇಳೆ ಅನೇಕ ದಾಖಲೆ, ನಗದು, ಬಂಗಾರ ವಶಕ್ಕೆ ಪಡೆಯಲಾಯಿತು. ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ, ಡಿವೈಎಸ್ಪಿ ಕಲಾವತಿ, ಇನ್‌ಸ್ಪೆಕ್ಟರ್ ಗುರುಬಸವರಾಜ, ಇನ್ನಿತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.