

ದಾವಣಗೆರೆ : ಶ್ರೀ ಪುರಂದರ ದಾಸರ ಆರಾಧನೆಯನ್ನು ನಗರದಲ್ಲಿ ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಸುಪ್ರಭಾತ ಕಾರ್ಯಕ್ರಮವನ್ನು ನಂದಕಿಶೋರ ಭಜನಾ ಮಂಡಳಿಯ ಅಧ್ಯಕ್ಷೆ ಗೀತಾ ಗುರುರಾಜ ಆಚಾರ್ ನಡೆಸಿಕೊಟ್ಟರು. ನಂತರ ಭಜನಾ ಮಂಡಳಿಯವರು ಮತ್ತು ಭಕ್ತರು ಶ್ರೀ ಪುರಂದರ ದಾಸರ ಭಾವಚಿತ್ರ ಹಿಡಿದು ಭಜನೆ ಮಾಡುತ್ತ, ಕೋಲಾಟ ಆಡುತ್ತ ಲಾಯರ್ ರಸ್ತೆ, ಅಶೋಕ ರಸ್ತೆ ಹಾಗೂ ಕೆ.ಬಿ. ಬಡಾವಣೆ ರಾಘವೇಂದ್ರ ಸ್ವಾಮಿ ಮಠದ ಮಾರ್ಗವಾಗಿ ಯಾಯಿವಾರ ಮಾಡಿದರು. ನಂತರ ಪ್ರವಚನಕಾರರಾದ ಅಜಿತ್ ಆಚಾರ್ ಅವರು ಪುರಂದರ ದಾಸರ ಬದುಕು, ಸಾಧನೆಯ ಬಗ್ಗೆ ವಿವರಿಸಿದರು. ತಮ್ಮ ಸಂಪತ್ತನ್ನು ದಾನ ಮಾಡಿ ದಾಸರಾದರು. ಕೀರ್ತನೆಗಳ ಮೂಲಕ ಜನಜಾಗೃತಿ ಮೂಡಿಸಿದರು ಎಂದು ತಿಳಿಸಿದರು. ಪಂಡಿತ ವೆಂಕಟ ಗಿರೀಶಾಚಾರ್ ಅವರು ದಾಸರ ಮಹಿಮೆಯನ್ನು ಕೊಂಡಾಡಿದರು. ಕಂಪ್ಲಿ ಗುರುರಾಜಾಚಾರ್, ಪಿ.ಕೆ. ಪ್ರಕಾಶ್ ಪಾಟೀಲ್, ಡಾ.ಸಿ.ಕೆ. ಆನಂದತೀರ್ಥಾಚಾರ್, ರಾಜಣ್ಣ ಇತರರು ಇದ್ದರು. ನಂತರ ಸಂಘದ ಕಾರ್ಯದರ್ಶಿ ಸಂಧ್ಯಾ ಪ್ರಕಾಶ್ ವಾರ್ಷಿಕ ವರದಿ ಮಂಡಿಸಿದರು. ಸರಯೂ ಮುತಾಲಿಕ್ ವಂದಿಸಿದರು.