ಠಾಣೆಗೆ ಮುತ್ತಿಗೆ ಹಾಕಲು ಯತ್ನ

renu.jpg
Published on

ದಾವಣಗೆರೆ: ನಾವು ಕರಸೇವಕರು ನಮ್ಮನ್ನೂ ಬಂಧಿಸಿ ಎಂದು ಒತ್ತಾಯಿಸಿ ಸೋಮವಾರ ನಗರದ ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿ 24 ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
 ನಗರದ ಪಿ.ಜೆ.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದ ರೇಣುಕಾಚಾರ್ಯ ನೇತೃತ್ವದಲ್ಲಿ ‘ನಾನು ಅಯೋಧ್ಯೆ ಶ್ರೀರಾಮ ಮಂದಿರದ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಫಲಕಗಳನ್ನು ಹಿಡಿದು ಮುಖಂಡರು ಮತ್ತು ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
 ಕೇಸರಿ ಶಾಲು ಹಾಕಿ ವಿಜಯರಥ ವಾಹನದ ಹಿಂದೆ ಹೆಜ್ಜೆ ಹಾಕಿದ ಪ್ರತಿಭಟನಾಕಾರರು ಮಾರ್ಗದುದ್ದಕ್ಕೂ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಕರಸೇವಕರನ್ನು ಬಂಧಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ಎಂದು ಧಿಕ್ಕಾರ ಕೂಗಿದರು.
  ನಗರದ ಪಿ.ಬಿ.ರಸ್ತೆ, ಅಶೋಕ ರಸ್ತೆ, ಜಯದೇವ ವೃತ್ತ ಹಾಗೂ ಅಂಬೇಡ್ಕರ್ ಸರ್ಕಲ್ ಮಾರ್ಗದ ಮೂಲಕ ಬಡಾವಣೆ ಪೊಲೀಸ್ ಠಾಣೆಗೆ ತೆರಳಿದರು. ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ ನಾವು ಫೋಟೋ ಶೂಟ್‌ಗೆ ಇಲ್ಲಿಗೆ ಬಂದಿಲ್ಲ. ಸರ್ಕಾರಕ್ಕೆ ತಾಕತ್ತಿದ್ದರೆ ನಮ್ಮನ್ನೂ ಬಂಧಿಸಲಿ ಎಂದು ಆಗ್ರಹಿಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
 ಪ್ರತಿಭಟನೆ ಹಿನ್ನೆಲೆಯಲ್ಲಿ ಮೊದಲೇ ಬ್ಯಾರಿಕೇಡ್ ಹಾಕಿ ಠಾಣೆಯ ಮುಂಭಾಗದ ಗೇಟ್ ಭದ್ರಪಡಿಸಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದ ಪೊಲೀಸರು ಠಾಣೆ ಒಳಪ್ರವೇಶಿಸಲು ಅಡ್ಡಿಪಡಿಸಿದರು. ಕಾರ್ಯಕರ್ತರ ನೂಕಾಟ ಹೆಚ್ಚಾಗುತ್ತಿದ್ದಂತೆ ಮಾಜಿ ಶಾಸಕ ರೇಣುಕಾಚಾರ್ಯ, ಮಾಜಿ ಮೇಯರ್ ಬಿ.ಜೆ.ಅಜಯ್‌ಕುಮಾರ್, ಡಾ.ರವಿಕುಮಾರ್, ಚಂದ್ರಶೇಖರ ಪೂಜಾರ್ ಮತ್ತಿತರರನ್ನು ಬಂಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net