

ದಾವಣಗೆರೆ : ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದ ಮೇಲೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ಒತ್ತಾಯಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟದ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಕಳಿಸಲಾಯಿತು.
ಪ್ರತಿಭಟನೆಯ ವೇಳೆ ಒಕ್ಕೂಟದ ಸಂಚಾಲಕ ಟಿ. ಅಸ್ಗರ್ ಮಾತನಾಡಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಡಿ. 24ರಂದು ಕಾರ್ಯಕ್ರಮವೊಂದರಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣ ಮಾಡಿ, ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಜತೆಗೆ ಮುಸ್ಲಿಂ ಮಹಿಳೆಯರ ವೈವಾಹಿಕ ಜೀವನವನ್ನು ಬಹಿರಂಗವಾಗಿ ಅವಮಾನಿಸಿದ್ದಾರೆ. ಇಂತಹವರ ಮೇಲೆ ತಕ್ಷಣ ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ತಂಜಿಮ್ ಕಮಿಟಿ ಕಾರ್ಯದರ್ಶಿ ಶಾನವಾಜ್ ಖಾನ್ ಮಾತನಾಡಿ, ಜಾತಿ, ಮತಗಳ ಮಧ್ಯೆ ವಿಷ ಬೀಜ ಬಿತ್ತುತ್ತ ಕೋಮು ಸಂಘರ್ಷ ನಡೆಸಲು ಪ್ರಭಾಕರ್ ಭಟ್ ಪ್ರಚೋದನೆ ನೀಡುತ್ತಿದ್ದಾರೆ. ಶಾಂತಿಯ ರಾಜ್ಯದಲ್ಲಿ ಕೋಮು ಗಲಭೆ ಹುಟ್ಟುಹಾಕಲು ಪ್ರಯತ್ನಿಸುತ್ತಿರುವ ಅವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಮುಖಂಡರಾದ ಮಹಮ್ಮದ್ ಶೋಯೆಬ್, ರಜ್ವಿ ರಿಯಾಜ್ ಸಾಬ್, ಇಸ್ಮಾಯಿಲ್ ಜಬೀವುಲ್ಲಾ, ಸೈಯದ್ ಆರೀಫ್, ಆದಿಲ್ ಖಾನ್, ಮಹಮ್ಮದ್ ಹಯಾತ್, ಇನಾಯತ್ ಅಲಿ ಖಾನ್, ಕೆ.ಎಚ್.ಮೆಹಬೂಬ್, ಬ್ಯಾಟರಿ ಜಬೀವುಲ್ಲಾ, ಕಲಿಂವುಲ್ಲಾ ಖಾನ್, ಮನ್ಸೂರ್, ನವೀದ್, ಅಜ್ಮತ್, ರಫೀಕ್, ಹೈದರ್, ಎನ್.ಉಸ್ಮಾನ್, ನೂರ್, ಅಯೂಬ್ ಬುತ್ತಿ ಇದ್ದರು.