ಸುಖದೇವ ಸಿಂಗ್ ಹತ್ಯೆಗೆ ಖಂಡನೆ

protest_20231209002343156.jpg
Published on

ದಾವಣಗೆರೆ : ರಾಷ್ಟ್ರೀಯ ರಾಜಪೂತ ಕರಣಿ ಸೇನಾದ ಅಧ್ಯಕ್ಷ ಸುಖದೇವ ಸಿಂಗ್ ಗೋಗಾಮೆಡಿ ಅವರ ಹತ್ಯೆಯನ್ನು ಖಂಡಿಸಿ ಜಿಲ್ಲಾ ರಾಜಪೂತ ಮಹಾಸಭಾ ಹಾಗೂ ವಿಷ್ಣು ಸಮಾಜದ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ಹಾಗೂ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು.
 ಮಹಾತ್ಮ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ಮಹಾಸಭಾದ ಸದಸ್ಯರು ‘ಸುಖದೇವ್ ಸಿಂಗ್ ಅಮರ್ ರಹೇ’ ಎಂದು ಘೋಷಣೆ ಕೂಗಿದರು. ಬಳಿಕ ಪಿ.ಬಿ. ರಸ್ತೆಯ ಮೂಲಕ ಬೈಕ್ ರ‌್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
 ಮಾನವೀಯ ಅಂತಃಕರಣ, ಸಮರಸದ ಬಾಳ್ವೆಯನ್ನು ಪ್ರತಿಪಾದಿಸುತ್ತ ಜೀವನ ಸಾಗಿಸುತ್ತಿದ್ದ ಸುಖದೇವ್ ಸಿಂಗ್ ಹತ್ಯೆ ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಜೆ. ಈಶ್ವರ್ ಸಿಂಗ್ ಕವಿತಾಳ ಆಗ್ರಹಿಸಿದರು.
 ಸಮಾಜದ ಮುಖಂಡರಿಗೆ ಜೀವ ಭಯವಿದ್ದು, ಇಂತಹ ಕೃತ್ಯಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಮುಂದೆ ಎಂದೂ ಇಂತಹ ಸಮಾಜ ಘಾತುಕ ಕೃತ್ಯ ನಡೆಯದಂತೆ ಮುಖಂಡರಿಗೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
 ಮುಖಂಡರಾದ ಮೂಲ್‌ಸಿಂಗ್ ರಾಥೋಡ್, ಗೌತಮ್ ಜೈನ್, ರಾಜು ಭಂಡಾರಿ, ಗಣಪತ್‌ಸಿಂಗ್, ಓಂಪ್ರಕಾಶ್, ರಾಜು ಪಟೇಲ್, ದಳಪತ್ ಸಿಂಗ್, ಅಮರ್ ಸಿಂಗ್ ಭಾಟಿ, ಗೋಪಾಲ್ ಸಿಂಗ್ ಭಾಟಿ, ಗಣಪತ್ ಸಿಂಗ್ ದೇವ್ಡಾ,
 ಗೌತಮ್ ಜೈನ್, ರಾಕೇಶ್ ರಾಹುಲ್, ರಾಜು ಜಿ. ಪಾಟೀಲ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net