

ದಾವಣಗೆರೆ : ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕ ವಿಷಯದಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಲು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ಸೇರಿದ ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಮುಖಂಡರು ಘೋಷಣೆ ಕೂಗುವ ಮೂಲಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ನಂತರ ತಹಸೀಲ್ದಾರರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿಪತ್ರ ರವಾನಿಸಲಾಯಿತು. ಎಐಡಿಎಸ್‌ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯಾದ್ಯಂತ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಇಲ್ಲಿಯವರೆಗೂ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲ. ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು ಇಲ್ಲಿಯವರೆಗೂ ತರಗತಿಗಳು ಸರಿಯಾಗಿ ನಡೆಯದೇ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ ಎಂದರು. ಇದು ಅವರ ಶೈಕ್ಷಣಿಕ ಭವಿಷ್ಯವನ್ನು ಅತಂತ್ರವನ್ನಾಗಿಸಿದೆ. ಮುಂದಿನ ತಿಂಗಳು ಪದವಿ ವಿದ್ಯಾರ್ಥಿಗಳ ಮೊದಲ ಆಂತರಿಕ ಪರೀಕ್ಷೆಗಳು ನಡೆಯಬೇಕಿದ್ದು ಪಾಠಗಳು ಇನ್ನೂ ಆರಂಭವಾಗಿಲ್ಲ. ಯುಜಿಸಿಯ ಹೊಸ ನಿರ್ದೇಶನಗಳು ಹಾಗೂ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮೊಕದ್ದಮೆಯಿಂದ ಅತಿಥಿ ಉಪನ್ಯಾಸಕರ ನೇಮಕಾತಿಯು ನನೆಗುದಿಗೆ ಬಿದ್ದಿದೆ ಎಂದು ಹೇಳಿದರು. ಶೈಕ್ಷಣಿಕ ವಿಷಯಗಳಲ್ಲಿ ರಾಜ್ಯ ಸರ್ಕಾರವು ಕೇಂದ್ರದ ನಿರ್ಧಾರಗಳನ್ನು ಪಾಲಿಸುವುದು ಕಡ್ಡಾಯವಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವಿದೆ. ಇದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಪೂರಕವಾದ ಸ್ಪಷ್ಟ ನಿಲುವು ತಾಳಬೇಕು. ಇಂತಹ ಪರಿಸ್ಥಿತಿಯಲ್ಲಿ, ರಾಜ್ಯ ಸರ್ಕಾರವು ಶೈಕ್ಷಣಿಕ ಚಟುವಟಿಕೆಗಳು ಸರಾಗವಾಗಿ ನಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತುರ್ತಾಗಿ ಕೈಗೊಂಡು ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲವನ್ನು ಪರಿಹರಿಸಬೇಕೆಂದು ಆಗ್ರಹಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ.ಎಸ್, ಗಂಗಾಧರ, ವರಲಕ್ಷ್ಮಿ, ಪ್ರೇಮ್ ಕುಮಾರ್, ಅನುಷಾ, ಕವನ, ಮಧು, ಪರಶುರಾಮ, ಮಂಜುನಾಥ್ ಎಚ್.ವಿ. ಸೇರಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.